'ರೈತರೊಂದಿಗೆ ನಾವಿದ್ದೇವೆ'... ವಿನೂತನ ಅಭಿಯಾನಕ್ಕೆ ಚಾಲನೆ

ಯಾವುದೇ ಒತ್ತಡಗಳಿಗೆ ಒಳಗಾಗದೇ ರೈತರು ತಮ್ಮ ಜಾನುವಾರುಗಳನ್ನು ಜೋಪಾನ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ 8 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ರೈತರು ಸಹ ಮೇವಿನ ಬಣವಿ ಹೊಂದಿದ್ದಾರೆ. ಜಿಲ್ಲಾಡಳಿತದಿಂದ ಜಿಲ್ಲೆಯ ಎ.ಪಿ.ಎಂ.ಸಿಗಳು ಸೇರಿದಂತೆ ವಿವಿಧ 7 ಸ್ಥಳಗಳಲ್ಲಿ ಮೇವು ಬ್ಯಾಂಕ ಸ್ಥಾಪಿಸಲಾಗಿದೆ. ಈ ಮಾಹಿತಿಯನ್ನು ಪ್ರತಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Written by - Manjunath Naragund | Last Updated : Apr 2, 2024, 10:12 PM IST
 'ರೈತರೊಂದಿಗೆ ನಾವಿದ್ದೇವೆ'... ವಿನೂತನ ಅಭಿಯಾನಕ್ಕೆ ಚಾಲನೆ  title=

ಧಾರವಾಡ : ಕಳೆದ ಸೆಪ್ಟೆಂಬರ ಮತ್ತು ಅಕ್ಟೋಬರದಲ್ಲಿ ರಾಜ್ಯ ಸರ್ಕಾರವು ಧಾರವಾಡ ಜಿಲ್ಲೆ ಪೂರ್ಣ ಬರಪಡಿತ ಜಿಲ್ಲೆಯೆಂದು ಘೋಷಿಸಿತು. ಅಂದಿನಿಂದ ಧಾರವಾಡ ಜಿಲ್ಲಾಡಳಿತವು ಜನ, ಜಾನುವಾರುಗಳಿಗೆ ಅಗತ್ಯವಾದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ನರೇಗಾ ಯೋಜನಯಡಿ ಉದ್ಯೋಗ ನೀಡಲು ಕಾರ್ಯಾರಂಭ ಮಾಡಿತು.

ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಸರಬರಾಜು ಮಾಡಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 7 ಮೇವು ಬ್ಯಾಂಕಗಳನ್ನು ತರೆಯಲಾಗಿದ್ದು, ಈಗಾಗಲೇ ರೈತರು ಮೇವು ಖರೀದಿ ಮಾಡುತ್ತಿದ್ದಾರೆ.ಆದರೂ ರೈತರಿಗೆ ಮೇವು ಬ್ಯಾಂಕ್, ಮೇವು ಮಾರಾಟದ ಬಗ್ಗೆ ಮಾಹಿತಿ ನೀಡಲು ಮತ್ತು ಬರ ಪರಿಸ್ಥಿತಿಯಲ್ಲಿ ರೈತರಿಗೆ ಧೈರ್ಯ ತುಂಬಲು ಧಾರವಾಡ ಜಿಲ್ಲಾಡಳಿತವು “ರೈತರೊಂದಿಗೆ ನಾವಿದ್ದೇವೆ...” ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲೆಯ ರೈತರಿಗೆ ಕುಡಿಯುವ ನೀರು, ಜಾನುವಾರು ಮೇವು ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಮತ್ತು ಬರಪರಿಹಾರ ಪೂರಕ ಸೌಲಭ್ಯ ದೊರಕಿಸಲು ಅನುಕೂಲವಾಗುವಂತೆ ಕಂದಾಯ ಇಲಾಖೆ, ಪಶುಪಾಲನೆ ಇಲಾಖೆ ಹಾಗೂ ಪಂಚಾಯತ ರಾಜ್ಯ ಇಲಾಖೆಗಳ ಸಹಯೋಗದಲ್ಲಿ ರೈತರಿಗೆ ಸರ್ಕಾರ, ಜಿಲ್ಲಾಡಳಿತ ನಿಮ್ಮ ನೆರವಿಗೆ ಇದೆ ಎಂಬುದನ್ನು ತಿಳಿಸಲು ಈ ರೈತರೊಂದಿಗೆ ನಾವಿದ್ದೇವೆ... ಎಂಬ ವಿನೂತ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಒತ್ತಡಗಳಿಗೆ ಒಳಗಾಗದೇ ರೈತರು ತಮ್ಮ ಜಾನುವಾರುಗಳನ್ನು ಜೋಪಾನ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ 8 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ರೈತರು ಸಹ ಮೇವಿನ ಬಣವಿ ಹೊಂದಿದ್ದಾರೆ. ಜಿಲ್ಲಾಡಳಿತದಿಂದ ಜಿಲ್ಲೆಯ ಎ.ಪಿ.ಎಂ.ಸಿಗಳು ಸೇರಿದಂತೆ ವಿವಿಧ 7 ಸ್ಥಳಗಳಲ್ಲಿ ಮೇವು ಬ್ಯಾಂಕ ಸ್ಥಾಪಿಸಲಾಗಿದೆ. ಈ ಮಾಹಿತಿಯನ್ನು ಪ್ರತಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇಂದು (ಏ.02) ಬೆಳಿಗ್ಗೆ ಎಸಿ ಶಾಲಂ ಹುಸೇನ್, ತಹಸಿಲ್ದಾರ ಡಾ. ಡಿ.ಎಚ್. ಹೂಗಾರ ಹಾಗೂ ಪಶುಪಾಲನೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ನೇತೃತ್ವದಲ್ಲಿ ಧಾರವಾಡ ತಾಲೂಕು ಆಡಳಿತದಿಂದ ಧಾರವಾಡ ಹಳೆ ಎಪಿಎಂಸಿಯ ದನಗಳ (ಮಾರಾಟ) ಸಂತೆ ಜಾಗದಲ್ಲಿ ರೈತರಿಗೆ ಧ್ವನಿವರ್ಧಕ ಬಳಸಿ ಜಾಗೃತಿ ಮೂಡಿಸುವ ಮೂಲಕ ಅಭಿಯಾನ ಆರಂಭಿಸಲಾಯಿತು.

ಮೇವು ಲಭ್ಯತೆ, ದಾಸ್ತಾನು ಬಗ್ಗೆ ಹಾಗೂ ಕುಡಿಯುವ ನೀರಿನ ಕೊರತೆ ಇಲ್ಲ ಎಂಬುವುದರ ಬಗ್ಗೆ ಸಾಕಷ್ಟು ಸಲ ಮಾಧ್ಯಮ, ಗ್ರಾಮ ಪಂಚಾಯಿತಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗಿದೆ. ಈಗಲೂ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಜಿಲ್ಲೆಯ ಧಾರವಾಡ ತಾಲೂಕಿನ ಮಾಧನಬಾವಿಯಲ್ಲಿ ಫೆ. 28, 2024 ರಂದು ಮೊದಲು ಮೇವು ಬ್ಯಾಂಕ ತೆರೆಯಲಾಗಿತ್ತು. ಧಾರವಾಡ ತಾಲೂಕಿನ ಮಾಧನಬಾವಿ, ಧಾರವಾಡ ಎ.ಪಿ.ಎಂ.ಸಿ., ಹುಬ್ಬಳ್ಳಿ ತಾಲೂಕಿನ ಶರೇವಾಡ ಮತ್ತು ಶಿರಗುಪ್ಪಿ, ಕಲಘಟಗಿ ಎ.ಪಿ.ಎಂ.ಸಿ., ಕುಂದಗೋಳ ಎ.ಪಿ.ಎಂ.ಸಿ., ನವಲಗುಂದ ಎ.ಪಿ.ಎಂ.ಸಿ. ಸೇರಿ ಒಟ್ಟು 7 ಸ್ಥಳಗಳಲ್ಲಿ ರೈತರ ಬೇಡಿಕೆಯಂತೆ ಈಗಾಗಲೇ ಜಿಲ್ಲಾಡಳಿತದಿಂದ ಮೇವು ಬ್ಯಾಂಕ ತೆರೆಯಲಾಗಿದೆ.

ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ಮೇವು ಬ್ಯಾಂಕ್‍ಗಳಿಂದ ಈಗಾಗಲೇ ಸುಮಾರು 38 ಜನ ರೈತರು 24.02 ಟನ್ ಮೇವು ಖರೀದಿಸಿದ್ದಾರೆ. ಮೇವು ಬ್ಯಾಂಕಗಳಲ್ಲಿ ಒಟ್ಟು ಸಂಗ್ರಹಿತ 47.16 ಟನ್ ಮೇವಿನಲ್ಲಿ ಇನ್ನೂ 23.14 ಟನ್ ಮೇವು ಮಾರಾಟಕ್ಕೆ ಲಭ್ಯವಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿವಾರ ದನಗಳ ಸಂತೆ ಧಾರವಾಡದಲ್ಲಿ (ಮಂಗಳವಾರ) ಹುಬ್ಬಳ್ಳಿಯಲ್ಲಿ (ಶನಿವಾರ) ನವಲಗುಂದದಲ್ಲಿ (ಬುಧವಾರ) ನೂಲ್ವಿಯಲ್ಲಿ (ಗುರುವಾರ) ಕಲಘಟಗಿಯಲ್ಲಿ (ಮಂಗಳವಾರ) ಮತ್ತು ಕುಂದಗೋಳದಲ್ಲಿ (ಸೋಮವಾರ) ಜರುಗುತ್ತದೆ. ಇಲ್ಲಿಗೆ ಬರುವ ರೈತರಿಗೆ ರೈತರೊಂದಿಗೆ ನಾವಿದ್ದೇವೆ... ಎಂಬ ಅಭಿಯಾನದ ಮೂಲಕ ಮಾಹಿತಿ ನೀಡಿ, ಸರಕಾರ ನಿಮ್ಮೊಂದಿಗೆಯಿದೆ ಎಂಬ ಭರವಸೆ ಮೂಡಿಸಲಾಗುತ್ತದೆ.

ಸಹಾಯವಾಣಿ ಹಾಗೂ ಇತರ ಸೌಲಭ್ಯಗಳ ಕುರಿತು ರೈತರಿಗೆ ಧ್ವನಿವರ್ಧಕ ಬಳಸಿ, ಪೊಸ್ಟರ್, ಬ್ಯಾನರ್ ಅಳವಡಿಕೆ, ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. 
 ಅಭಿಯಾನದ ಅಂಗವಾಗಿ ಧಾರವಾಡ ತಹಸಿಲ್ದಾರ ಡಾ. ಡಿ.ಎಚ್. ಹೂಗಾರ ಅವರು ಧ್ವನಿವರ್ಧಕ ಬಳಸಿ ಮಾತನಾಡಿ, ರೈತರ ನೆರವಿಗೆ ತಹಸಿಲ್ದಾರ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ತಮಗೆ ಮೇವು, ನೀರಿನ ಕೊರತೆ ಉಂಟಾದಲ್ಲಿ ತಕ್ಷಣ ಕರೆ ಮಾಡಿ, ಪರಿಹರಿಸುತ್ತೇವೆ. ಧಾರವಾಡದ ಮಾಧನಬಾವಿ ಸರಕಾರಿ ಗೋಶಾಲೆ ಮತ್ತು ಧಾರವಾಡ ಎ.ಪಿ.ಎಂ.ಸಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಪ್ರತಿ ಕೆ.ಜಿ. ಮೇವಿಗೆ ರೂ. 2 ರ ದರದಲ್ಲಿ ಗರಿಷ್ಠ 50 ಕೆಜಿ ಮೇವನ್ನು ಒಬ್ಬ ರೈತನಿಗೆ ನೀಡಲಾಗುತ್ತದೆ. ಇದನ್ನು ರೈತ ಹೊಂದಿರುವ ಜಾನುವಾರುಗಳಿಗೆ ಅನುಗುಣವಾಗಿ ನೀಡಲಾಗುತ್ತದೆ. ರೈತರು ತಮ್ಮ ಜಾನುವಾರುಗಳನ್ನು ಸಾಕಿ, ಸಲುಹಬೇಕು. ರೈತರ ಕಷ್ಟಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸದಾ ಸ್ಪಂದಿಸಿ, ಬೆನ್ನಿಗಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಮಾತನಾಡಿ, ರೈತರು ಬರ ಪರಸ್ಥಿತಿಯಿಂದ ಹೆದರುವ ಅಗತ್ಯವಿಲ್ಲ. ಸರಕಾರ, ಜಿಲ್ಲಾಡಳಿತ ನಿಮ್ಮ ನೆರವಿಗಿದೆ. ರೈತರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂದು ತಿಳಿಸಿದರು.

ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ಅವರು ಮಾತನಾಡಿ, ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಬ್ಯಾಂಕ್ ತೆರೆಯಲಾಗಿದೆ. ರೈತರು ತಮ್ಮ ಹತ್ತಿರದ ಪಶುಆಸ್ಪತ್ರೆ ವೈದ್ಯರಿಂದ ಜಾನುವಾರು ಕುರಿತು ದೃಢಿಕರಣ ಪತ್ರದೊಂದಿಗೆ ಆಧಾರ ಕಾರ್ಡ ನೀಡಿ, ತಮಗೆ ಬೇಕಿರುವ ಮೇವಿನ ಒಟ್ಟು ಕೆಜಿಯ ಹಣ ತುಂಬಿ ಹೆಸರು ನೋಂದಾಯಿಸಬೇಕು. ಪ್ರತಿ ಕೆಜಿಗೆ 2 ರೂ ದಂತೆ ರೈತನ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮೇವು ಪೂರೈಸಲಾಗುತ್ತದೆ. ದನಗಳಿಗೆ ಈಗ ಬಾಯಿಬೆನೆ, ಕಾಲುಬೆನೆ ಲಸಿಕೆ ನೀಡಲಾಗುತ್ತಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.  

ರೈತರ ಅಭಿಪ್ರಾಯ:

ರೈತ ಮಹಾಂತೇಶ ಕಟಗಿ, ಅಂಬ್ಲಿಕೊಪ್ಪ ಗ್ರಾಮ: ಆಕಳು ಮಾರಲು ದನದ ಸಂತೆಗೆ ಬಂದಿದ್ದೆನೆ. ಆಕಳು ಇಯಲು ಬಂದಿದೆ. ಬೇಸಿಗೆ ದಿನ, ಅದನ್ನು ಜೋಪಾನ ಮಾಡಲು ಕಷ್ಟವಾಗುತ್ತಿದೆ. ಸ್ವಂತ ಮೇವಿನ ಬಣವಿ ಇದೆ ಎಂದರು.ರೈತ ಬಾಳಪ್ಪ ತಳವಾರ ಮತ್ತು ಬಸವರಾಜ ಮರೆದ, ಕಲ್ಲೂರ ಗ್ರಾಮ: ಮುಂಗಾರಿ ಹ್ವಾರೆ ಮಾಡಕ ಎತ್ತ ಬೇಕು. ಅದಕ್ಕ ಬಂದಿವಿ. ದನಗಳ ದರ ಎನ ಕಡಿಮೆ ಇಲ್ಲ. ಕಳೆದ ವರ್ಷದ ಹಾನಿಯಿಂದ ಮೇವಿನ ಕೊರತೆ ಇದೆ. ಈಗ ಸಾಹೆಬ್ರ ಇಲ್ಲೆ ಎಪಿಎಂಸಿ ನ್ಯಾಗ ಮೇವು ಐತಿ ಅಂದಾರು. ನಮ್ಮೂರಾಗ ಹೇಳತಿವಿ. ನಮಗ ಗೊತ್ತಿದ್ದ ರೈತರಿಗೂ ಮೇವು ಇಲ್ಲಿ ಸಿಗತೈತಿ ಅಂತಾ ಹೇಳತಿವಿ ಅಂದ್ರು.ರೈತ ಈರಪ್ಪ ಅಂಗಡಿ, ಸವದತ್ತಿ ಪಟ್ಟಣ: ಎತ್ತ ಒಯ್ಯಾಕ ಬಂದೀನಿ, ನಮ್ಮೂರಾಗ ಎನ ಸಮಸ್ಯೆ ಇಲ್ಲ ಅಂದರು. 

(ದನದ ದಲ್ಲಾಳಿ) ನಿಂಗಪ್ಪ ಗುಂಡೂರ, ಇನಾಮಹೊಂಗಲ ಗ್ರಾಮ: ದನದ ಸಂತೆಗೆ ಬರುವ ರೈತರಿಗೆ ಮೇವಿನ ಕೊರತೆಯ ಭಯ ಐತಿ. ಆದರೆ ಅವರಿಗೆ ಮೇವು ಸಿಗುವುದರ ಬಗ್ಗೆ ತಿಳಿದಿಲ್ಲ. ನೀರಿನ ಸಮಸ್ಯೆನೂ ಇಲ್ಲ. ನಾನು ಬಾಳ ರೈತರ ದನ ತಗೊಂಡು ಮತ್ತೊಬ್ಬ ರೈತರಿಗೆ ಕೊಡಸ್ತಿನಿ. ಅವರ ಬಾಳೆ ಸಮಸ್ಯೆಗೆ, ರೊಕ್ಕದ ಅಡಚಣೆಗೆ ದನಗಳನ್ನು ಮಾರತಾರು ಎಂದರು.

 ಚಿಕ್ಕಮಲ್ಲಿಗವಾಡದ ರೈತ ರಾಮಪ್ಪ ಅಂಗಡಿ, ನಮಗ ರೊಕ್ಕದ ಹರಕತ ಆಗೈತಿ, ಅದಕ್ಕ ಎತ್ತ ಮಾರಾಕ ತಂದಿನಿ ಎಂದ. ಹೆಬ್ಬಳ್ಳಿ ರೈತ ಈರಪ್ಪ ಕುಡೆಕಾರ, ಬಿತ್ತಾಕ ಜತ್ತ ಆಗುವಂತ ಎತ್ತ ಖರೀದಿಗೆ ಬಂದೀನಿ ಮತ್ತು ಈಗ ಇರು ಎತ್ತ ಮಾರಾಕ ಹತ್ತೀನಿ ಅಂದ್ರು. ಧಾರವಾಡದ ರೈತರಾದ ನಕುಲ ಉಳ್ಳಿಗೇರಿ, ಬಸವರಾಜ ಜಾಧವ ಅವರು ದನದ ಸಂತಿ ಜಾಗಾದಾಗ ಇನ್ನೂ ಹೆಚ್ಚು ದನಗಳಿಗೆ ಕುಡಿಯುವ ನೀರಿನ ತೊಟ್ಟಿ, ರೈತರಿಗೆ ಕುಂಡ್ರಾಕ ನೆರಳು ಮತ್ತು ಕುಡಿಯಾಕ ನೀರಿನ ವ್ಯವಸ್ಥೆ ಆಗಬೇಕು. ಇಲ್ಲಿ ಗಿಡಗಳನ್ನು ನೆಟ್ಟು ದನಗಳಿಗೆ ನಿಲ್ಲಾಕ ನೆರಳು ಆಗಬೇಕು ಎಂದರು.ಕವಲಗೇರಿ ರೈತರಾದ ಮಹಾಂತೇಶ ಗೊಮಾಡಿ, ನಿಂಗನಗೌಡ ಪಾಟೀಲ, ಷರೀಫ ದೊಡಮನಿ ತಮ್ಮ ಅಭಿಪ್ರಾಯ ತಿಳಿಸಿದರು. ಧಾರವಾಡ ಎಪಿಎಂಸಿ ಕಾರ್ಯದರ್ಶಿ ವಿ.ಎಂ. ಹಿರೇಮಠ ಅವರು ಅಭಿಯಾನದಲ್ಲಿ ಭಾಗವಹಿಸಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News