ಮತ ಬೇಕಾದಾಗ ಮನಃಸಾಕ್ಷಿ ಮಾರಿಕೊಳ್ಳುವುದು ಶೋಭೆಯಲ್ಲ: ಕೃಷ್ಣಭೈರೇಗೌಡಗೆ ಎಚ್‍ಡಿಕೆ ತಿರುಗೇಟು

5 ವರ್ಷ ಸರ್ಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ  ಹೊಡೆದ ಗಿರಾಕಿಗಳು, ಆ ನಂತರ ಕೆಸಿ ವ್ಯಾಲಿಯ ವಿಷ ನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ? ಎಂದು ಕೃಷ್ಣಭೈರೇಗೌಡಗೆ ಎಚ್‍ಡಿಕೆ ಪ್ರಶ್ನಿಸಿದ್ದಾರೆ.

Written by - Puttaraj K Alur | Last Updated : Jan 10, 2023, 04:30 PM IST
  • ಕೃಷ್ಣಭೈರೇಗೌಡರೇ ಕಾವೇರಿ ನದಿನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ
  • ನೀರೇ ಬರದ ಎತ್ತಿನಹೊಳೆ ಹೆಸರಲ್ಲಿ ಎತ್ತಿದ ಎತ್ತುವಳಿ ಸಾಲದೆಂದು KC ವ್ಯಾಲಿಯಲ್ಲಿ ಪರ್ಸಂಟೇಜ್ ಜೇಬಿಗಿಳಿಸಿದ್ದು ಯಾರು?
  • ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು
ಮತ ಬೇಕಾದಾಗ ಮನಃಸಾಕ್ಷಿ ಮಾರಿಕೊಳ್ಳುವುದು ಶೋಭೆಯಲ್ಲ: ಕೃಷ್ಣಭೈರೇಗೌಡಗೆ ಎಚ್‍ಡಿಕೆ ತಿರುಗೇಟು title=
ಕೃಷ್ಣಭೈರೇಗೌಡಗೆ ಎಚ್ಡಿಕೆ ತಿರುಗೇಟು

ಬೆಂಗಳೂರು: ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲವೆಂದು ಮಾಜಿ ಸಚಿವ ಕೃಷ್ಣಭೈರೇಗೌಡಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಕೆಸಿ ವ್ಯಾಲಿ ನೀರಿನ ಬಗ್ಗೆ ಕೋಲಾರಕ್ಕೆ ಬಂದು ಮಾತನಾಡುತ್ತೀರಿ, ತಾವು ಸಿಎಂ ಆಗಿದ್ದವರು, ನಿಮ್ಮ ತಂದೆ ಪ್ರಧಾನಿಯಾಗಿದ್ದವರು. ತಾವು ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಕೊಡಬಹುದಿತ್ತಲ್ಲಾ? ಆಗ ಏಕೆ ಕೋಲಾರ ಭಾಗದ ಕುರಿತು ಯೋಚನೆ ಮಾಡಿಲ್ಲ. ಈಗ ಇಲ್ಲಿ ಬಂದು ಕಲ್ಲಾಕುತ್ತಿದ್ದೀರಿ. ಇಂತಹ ಸ್ವಾರ್ಥ ರಾಜಕೀಯ ಬೇಡವೆಂದು ಕೃಷ್ಣಭೈರೇಗೌಡ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕೃಷ್ಣಭೈರೇಗೌಡ ವಿರುದ್ಧ ಕಿಡಿಕಾರಿದ್ದಾರೆ.

ಕೃಷ್ಣಭೈರೇಗೌಡರು ಬಹಳ ತಿಳಿವಳಿಕೆ ಉಳ್ಳವರು ಎಂದು ಭಾವಿಸಿದ್ದೆ. ನನ್ನಂತೆ ಅವರು ಹಳ್ಳಿಯಲ್ಲಿ ಕಲಿಯದೆ ವಿದೇಶದಲ್ಲಿ ಕಲಿತವರು. ಅವರ ಜ್ಞಾನದ ಪರಿಧಿ ದೊಡ್ಡದು ಎಂದು ತಿಳಿದಿದ್ದೆ. ಕೋಲಾರದಲ್ಲಿ ಸೋಮವಾರ ಅವರು ಕೊಟ್ಟ ಹೇಳಿಕೆ ಗಮನಿಸಿದ ಮೇಲೆ ಅವರ ಕುರಿತ ನನ್ನ ಅಭಿಪ್ರಾಯ ತಪ್ಪೆಂದು ಎನಿಸಿತು. ಕೃಷ್ಣಭೈರೇಗೌಡರೇ ಕಾವೇರಿ ನದಿನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾವೇರಿ ನ್ಯಾಯಾಧಿಕರಣ ರಚನೆ ಆಗಿದ್ದು ಯಾವಾಗ? ರಾಜ್ಯಕ್ಕೆ ಕಾವೇರಿ ನೀರಿನ ಹಕ್ಕು ಸಾಧಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪಾತ್ರ ಏನು? ಎಂಬುದರ ಬಗ್ಗೆ ದಯಮಾಡಿ ಮಾಹಿತಿ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಂಡ್ಯದ ಮನ್ಮುಲ್ನಲ್ಲಿ ತಯಾರಾಗ್ತಿರೋ ಬೆಲ್ಲದ ಬರ್ಫಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್

‘ನಿಮ್ಮ ತಂದೆ ಸಿ.ಭೈರೇಗೌಡರ ಬಗ್ಗೆ ನನಗೂ ಅಪಾರ ಗೌರವ ಇದೆ. ದೇವೇಗೌಡರ ಸಂಪುಟದಲ್ಲಿ ಪ್ರಭಾವೀ ಮಂತ್ರಿಗಳಾಗಿದ್ದ ನಿಮ್ಮ ತಂದೆಯವರು ಅಂದೇ ಕೋಲಾರಕ್ಕೆ ಕಾವೇರಿ ನೀರು ಹರಿಸುವ ಬಗ್ಗೆ ದನಿ ಎತ್ತಬಹುದಿತ್ತು. ಕೊನೆಗೆ ನೀವಾದರೂ ಹೋರಾಟ ನಡೆಸಬೇಕಿತ್ತು. ನೀರೇ ಬರದಿರುವ ಎತ್ತಿನಹೊಳೆ ಹೆಸರಿನಲ್ಲಿ ಎತ್ತಿದ ಎತ್ತುವಳಿ ಸಾಲದೆಂದು ಕೆಸಿ ವ್ಯಾಲಿಯಲ್ಲಿ ಪರ್ಸಂಟೇಜ್ ಜೇಬಿಗಿಳಿಸಿದ್ದು ಯಾರು? ಹಣದ ದುರಾಸೆಗೆ ವಿಷ ನೀರು ಹರಿಸಿ ಕೋಲಾರ ಜಿಲ್ಲೆ ಜನರನ್ನು ಸಾವಿನಕೂಪಕ್ಕೆ ತಳ್ಳಿದವರು ಯಾರು? ಆ ಗುತ್ತಿಗೆದಾರನ ಹಿಂದೆ ಅನುದಿನ ಗಿರಕಿ ಹೊಡೆದ ಗಿರಾಕಿ ಯಾರು ಎಂದು ನಿಮಗೆ ಗೊತ್ತಿಲ್ಲವೆ ಕೃಷ್ಣಭೈರೇಗೌಡರೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ನೈಟ್ರೇಟ್, ಪಾಸ್ಪರಸ್, ಸೀಸ ಸೇರಿ ಬೆಂಗಳೂರು ಜನರ ಮಲಮೂತ್ರಗಳೇ ತುಂಬಿರುವ ಕೊಳಚೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸದೆ ಕೋಲಾರಕ್ಕೆ ಹರಿಸಿದ್ದೇ ಮಹಾಪಾಪ. ಇಷ್ಟು ದಿನ ಅದನ್ನೇ ಪುಣ್ಯತೀರ್ಥ ಎಂದು ಡಂಗುರ ಹೊಡೆದವರು ಕೋಲಾರದಲ್ಲಿ 3ನೇ ಹಂತದ ಸಂಸ್ಕರಣೆ ಬಗ್ಗೆ ಹೇಳಿ ಕಾವೇರಿ ಬಗ್ಗೆ ಬೊಗಳೆ ಬಿಡುತ್ತೀರಲ್ಲ ಸ್ವಲ್ಪವಾದರೂ ಸಂಕೋಚ ಬೇಡವೇ ಕೃಷ್ಣಭೈರೇಗೌಡರೇ’ ಎಂದು ಎಚ್‍ಡಿಕೆ ಕುಟುಕಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ .! ಸಜ್ಜಾಗಿದೆ ನಿಂತಿದೆ ಪ್ರಜಾಧ್ವನಿ ಬಸ್

‘5 ವರ್ಷ ಸರ್ಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ  ಹೊಡೆದ ಗಿರಾಕಿಗಳು, ಆ ನಂತರ ಕೆಸಿ ವ್ಯಾಲಿಯ ವಿಷ ನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ? ಒಮ್ಮೆ ಯೋಚನೆ ಮಾಡಿ ಕೃಷ್ಣಭೈರೇಗೌಡರೇ? ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲ’ವೆಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News