ಉದ್ಯಮಿಯಾಗಿ ನಾನು ಸೋತಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ: ಸಿದ್ಧಾರ್ಥ್ ಭಾವುಕ ಪತ್ರ

ಆದಾಯ ತೆರಿಗೆ ಇಲಾಖೆಯ ಹಿಂದಿನ ಡಿಜಿಯಿಂದ ನನಗೆ ಕಿರುಕುಳ ಉಂಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಿದ್ಧಾರ್ಥ್.

Last Updated : Jul 30, 2019, 12:03 PM IST
ಉದ್ಯಮಿಯಾಗಿ ನಾನು ಸೋತಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ: ಸಿದ್ಧಾರ್ಥ್ ಭಾವುಕ ಪತ್ರ title=
Pic Courtesy: ANI

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ಧಾರ್ಥ್ ಹೆಗ್ಡೆ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಹೊಸ ಟ್ವಿಸ್ಟ್ ದೊರೆತಿದ್ದು, "ಉದ್ಯಮಿಯಾಗಿ ನಾನು ಸೋತಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ" ಎಂದು ಸಿದ್ಧಾರ್ಥ್ ಬರೆದಿರುವ ಪತ್ರ ದೊರೆತಿದೆ.

ನಿನ್ನೆಯೇ ಪತ್ರ ಬರೆದಿದ್ದ ಸಿದ್ದಾರ್ಥ್, ಇದನ್ನು ತಮ್ಮ ಆಪ್ತರಿಗೆ ಇಮೇಲ್ ಮಾಡುವಂತೆ ಕಾರ್ಯದರ್ಶಿಗೆ ಸೂಚಿಸಿದ್ದರು ಎನ್ನಲಾಗಿದೆ.

ನಾಪತ್ತೆಯಾಗಿರುವ ಸಿದ್ಧಾರ್ಥ್ ಬರೆದ ಭಾವುಕ ಪತ್ರದಲ್ಲಿ, ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ಉದ್ಯಮಿಯಾಗಿ ನಾನು ಸೋತಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ ಎಂದು ಬರೆಯಲಾಗಿದೆ.

ಕೆಫೆ ಕಾಫಿ ಡೇ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಜುಲೈ 27 ರಂದು ಪತ್ರ ಬರೆದಿದ್ದ ಸಿದ್ಧಾರ್ಥ್, ತಮ್ಮ 37 ವರ್ಷಗಳ ಪರಿಶ್ರಮದಿಂದ ಸಂಸ್ಥೆ ಕಟ್ಟಿದ್ದೇನೆ. ನಮ್ಮ ಕಂಪನಿಗಳು ಮತ್ತು ಅವುಗಳ ಅಂಗಸಂಸ್ಥೆಗಳಲ್ಲಿ ನೇರವಾಗಿ 30,000 ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ತಂತ್ರಜ್ಞಾನ ಕಂಪನಿಯಲ್ಲಿ(ಮೈಂಡ್ ಟ್ರೀ) ಇನ್ನೂ 20,000 ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಕಂಪನಿಯನ್ನು ಸ್ಥಾಪಿಸಿ ನಾನು ದೊಡ್ಡ ಷೇರುದಾರನಾಗಿದ್ದೇನೆ, ಆದರೆ  ನನ್ನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಇವುಗಳಿಗೆ ಒಂದು ಸರಿಯಾದ ಬಿಸಿನೆಸ್ ಮಾಡೆಲ್ ಸೃಷ್ಟಿಮಾಡುವಲ್ಲಿ ವಿಫಲನಾಗಿದ್ದೇನೆ. 

ನನ್ನಲ್ಲಿ ನಂಬಿಕೆ ಇಟ್ಟಿದ್ದ ಜನರಿಗೆ ನಿರಾಸೆಗೊಳಿಸಿದ್ದಕ್ಕೆ ನನ್ನನ್ನು ಕ್ಷಮಿಸಿ. ಆರ್ಥಿಕ ಒತ್ತಡದಿಂದ ನಾನು ನೊಂದಿದ್ದೇನೆ. ಉದ್ಯಮದಲ್ಲೂ ಯಶಸ್ಸು ಸಿಕ್ಕಿಲ್ಲ. ಷೇರು ವಿಚಾರದಲ್ಲಿ ನನಗೆ ಕಿರುಕುಳ ಉಂಟಾಗಿದೆ. ನಾನು ದೀರ್ಘಕಾಲ ಹೋರಾಡಿದೆ ಆದರೆ ಖಾಸಗಿ ಇಕ್ವಿಟಿ ಪಾಲುದಾರರಲ್ಲಿ ಒಬ್ಬರಿಂದ ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಇಂದು ಸತತ ಹೋರಾಟದ ಬಳಿಕ ಕೈ ಚಲ್ಲಿದ್ದೇನೆ. ಆರು ತಿಂಗಳ ಹಿಂದೆ ಸ್ನೇಹಿತರಿಂದ ದೊಡ್ಡ ಮೊತ್ತವನ್ನು ಎರವಲು ಪಡೆದಿದ್ದೇನೆ. 

ನಮ್ಮ ಮೈಂಡ್‌ಟ್ರೀ ಒಪ್ಪಂದವನ್ನು ನಿರ್ಬಂಧಿಸಲು ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ನಮ್ಮ ಷೇರುಗಳ ವಿಚಾರವಾಗಿ ಆದಾಯ ತೆರಿಗೆ ಇಲಾಖೆಯ ಹಿಂದಿನ ಡಿಜಿಯಿಂದ ನನಗೆ ಕಿರುಕುಳ ಉಂಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಿದ್ಧಾರ್ಥ್, ಐಟಿ ಅಧಿಕಾರಿಗಳು ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು. ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಶೇರು ಮಾರಾಟಕ್ಕೆ ತೊಂದರೆಯಾಯಿತು. ಬಳಿಕ ಕಾಫಿ ಡೇ ಷೇರುಗಳ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆಯಿಂದ ನಿರಂತರವಾಗಿ ನನಗೆ ಕಿರುಕುಳ ನೀಡಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನೀವು ಪ್ರತಿಯೊಬ್ಬರೂ ದೃಢವಾಗಿರಲು ಮತ್ತು ಹೊಸ ನಿರ್ವಹಣೆಯೊಂದಿಗೆ ಈ ವ್ಯವಹಾರಗಳನ್ನು ಮುಂದುವರಿಸಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ಎಲ್ಲಾ ತಪ್ಪುಗಳಿಗೆ ನಾನೇ ಸಂಪೂರ್ಣ ಜವಾಬ್ದಾರಿ. ಪ್ರತಿಯೊಂದು ಹಣಕಾಸಿನ ವ್ಯವಹಾರವೂ ನನ್ನ ಜವಾಬ್ದಾರಿ ಆಗಿದ್ದು, ನನ್ನ ತಂಡ, ಲೆಕ್ಕ ಪರಿಶೋಧಕರು ಮತ್ತು ಹಿರಿಯ ನಿರ್ವಹಣೆಯು ಸಿಬ್ಬಂದಿಗೆ ನನ್ನ ಎಲ್ಲಾ ವಹಿವಾಟುಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಮತ್ತು ನನ್ನ ಕುಟುಂಬ ಸೇರಿದಂತೆ ಯಾರೊಬ್ಬರಿಗೂ ಈ ಬಗ್ಗೆ ಮಾಹಿತಿ ತಿಳಿದಿಲ್ಲ.. ಈ ಎಲ್ಲದಕ್ಕೂ ನಾನು ಮಾತ್ರ ಜವಾಬ್ದಾರನಾಗಿದ್ದೇನೆ. ಕಾನೂನು ನನಗೆ ಮಾತ್ರ ಶಿಕ್ಷೆ ವಿಧಿಸಬೇಕು ಎಂದು ಬರೆದಿದ್ದಾರೆ.

ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ಇದು ನನ್ನ ಪ್ರಾಮಾಣಿಕ ಮನವಿಯಾಗಿದ್ದು, ಒಂದು ದಿನ ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರಿ ಮತ್ತು ನನ್ನನ್ನು ಕ್ಷಮಿಸುವಿರಿ ಎಂದು ನಾನು ಭಾವಿಸುತ್ತೇನೆ.

ನಾನು ನಮ್ಮ ಸ್ವತ್ತುಗಳ ಪಟ್ಟಿಯನ್ನು ಮತ್ತು ಪ್ರತಿ ಆಸ್ತಿಯ ತಾತ್ಕಾಲಿಕ ಮೌಲ್ಯವನ್ನು ಲಗತ್ತಿಸಿದ್ದೇನೆ. ನಮ್ಮ ಸ್ವತ್ತುಗಳ ಕೆಳಗೆ ನೋಡಿದಂತೆ ನಮ್ಮ ಹೊಣೆಗಾರಿಕೆಗಳನ್ನು ಮೀರಿಸುತ್ತದೆ. ಪ್ರತಿಯೊಬ್ಬರಿಗೂ ಮರುಪಾವತಿ ಮಾಡಲು ಸಹಾಯ ಮಾಡುತ್ತದೆ.

ವಂದನೆಗಳು,
ವಿ.ಜಿ. ಸಿದ್ಧಾರ್ಥ
 

Trending News