ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಕುರಿತು ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ..

ಮೇ 15, 1980 ರಂದು ಜನಿಸಿದ ರಿಷಿ ಸುನಕ್,  ಹ್ಯಾಂಪ್‌ಶೈರ್‌ನ ರೊಮ್ಸೆಯಲ್ಲಿರುವ ಸ್ಟ್ರೌಡ್ ಸ್ಕೂಲ್‌ ಆಂಡ್‌ ವಿಂಚೆಸ್ಟರ್ ಕಾಲೇಜು, ಬಾಯ್ಸ್‌ ಇಂಡಿಪೆಂಡೆಂಟ್‌ ಬೋರ್ಡಿಂಗ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. 

Written by - Bhavishya Shetty | Last Updated : Apr 18, 2022, 02:43 PM IST
  • ಭಾರತ ಮೂಲದ ರಿಷಿ ಸುನಕ್‌ ಬಗ್ಗೆ ಇಲ್ಲಿದೆ ಮಾಹಿತಿ
  • ಬ್ರಿಟಿಷ್‌ ಸರ್ಕಾರದಲ್ಲಿ ಚಾನ್ಸಲರ್‌ ಆಗಿರುವ ಸುನಕ್‌
  • ಬ್ರಿಟನ್‌ ಪ್ರಧಾನಿ ಜಾನ್ಸನ್‌ರಿಂದ ನೇಮಕೊಂಡಿರುವ ರಿಷಿ
ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಕುರಿತು ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.. title=
Rishi Sunak

ಭಾರತೀಯ ಮೂಲದವರಾದ ರಿಷಿ ಸುನಕ್‌ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವ ವ್ಯಕ್ತಿ. ಇನ್ಫೋಸಿಸ್‌ ಮುಖ್ಯಸ್ಥರಾದ ಎನ್‌.ಆರ್‌.ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಅಳಿಯ ರಿಷಿ ಸುನಕ್‌, ಬ್ರಿಟಿಷ್‌ ಸರ್ಕಾರದಲ್ಲಿ ಚಾನ್ಸಲರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ. 

ಇದನ್ನು ಓದಿ: ಮೊದಲ ಬಾರಿ ಬ್ರಿಟಿಷ್‌ ಪ್ರಧಾನಿ ಗುಜರಾತ್‌ಗೆ ಭೇಟಿ

ಮೇ 15, 1980ರಂದು ಜನಿಸಿದ ರಿಷಿ ಸುನಕ್,  ಹ್ಯಾಂಪ್‌ಶೈರ್‌ನ ರೊಮ್ಸೆಯಲ್ಲಿರುವ ಸ್ಟ್ರೌಡ್ ಸ್ಕೂಲ್‌ ಅಂಡ್‌ ವಿಂಚೆಸ್ಟರ್ ಕಾಲೇಜು, ಬಾಯ್ಸ್‌ ಇಂಡಿಪೆಂಡೆಂಟ್‌ ಬೋರ್ಡಿಂಗ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯ ನಾಯಕನಾಗಿಯೂ ಆಯ್ಕೆಯಾಗಿದ್ದ ಅವರು, ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಬೆಳವಣಿಗೆ ಕಂಡವರು. ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು, ಕನ್ಸರ್ವೇಟಿವ್ ಕ್ಯಾಂಪೇನ್ ಹೆಡ್‌ ಕ್ವಾರ್ಟರ್ಸ್‌ನಲ್ಲಿ ಇಂಟರ್ನ್‌ಶಿಪ್ ಪಡೆದರು. ಆ ಬಳಿಕ 2006ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದರು.

ಸುನಕ್ ಅವರ ಪೋಷಕರಾದ ಯಶವೀರ್ ಮತ್ತು ಉಷಾ ಭಾರತ ಮೂಲದವರು. ಸುನಕ್‌ ಅವರಿಗೆ ಮೂವರು ಒಡಹುಟ್ಟಿದವರಿದ್ದಾರೆ. ಅವರ ತಂದೆ ಯಶವೀರ್, ಕೀನ್ಯಾದ ಕಾಲೋನಿ ಪ್ರೊಟೆಕ್ಟರೇಟ್‌ನಲ್ಲಿ ಹುಟ್ಟಿ ಬೆಳೆದವರು. ಅವರ ತಾಯಿ ಉಷಾ ಟ್ಯಾಂಗನಿಕಾ (ಇಂದಿನ ತಾಂಜಾನಿಯಾ)ದಲ್ಲಿ ಜನಿಸಿದವರು. ಇನ್ನು ಸುನಕ್ ಅವರು ಆಗಸ್ಟ್ 2009ರಲ್ಲಿ ಇನ್ಫೋಸಿಸ್ ಸಂಸ್ಥಾಪಕರಾದ ಭಾರತೀಯ ಬಿಲಿಯನೇರ್ ಎನ್‌.ಆರ್‌.ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು. ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್‌ನಲ್ಲಿ ಶೇ. 0.91ರಷ್ಟು ಪಾಲನ್ನು ಹೊಂದಿದ್ದಾರೆ. ಇದು ಏಪ್ರಿಲ್ 2022ರ ಹೊತ್ತಿಗೆ ಸುಮಾರು $900m (£690m) ಮೌಲ್ಯದ್ದಾಗಿತ್ತು. ಆದರೆ ಈ ವರ್ಷ ಉಕ್ರೇನ್‌ ಮೇಲೆ ರಷ್ಯಾವು ಆಕ್ರಮಣ ನಡೆಸಿದ ಬಳಿಕವೂ ಇನ್ಫೋಸಿಸ್ ರಷ್ಯಾದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಎಂದು ಆರೋಪಿಸಿ ಸುನಕ್ ಮತ್ತು ಅವರ ಕುಟುಂಬವನ್ನು ಟೀಕೆಗೆ ಗುರಿಯಾಗುವಂತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಇನ್ಫೋಸಿಸ್ ತನ್ನ ರಷ್ಯಾದ ಕಚೇರಿಯನ್ನು ಮುಚ್ಚುವುದಾಗಿ ಘೋಷಿಸಿದೆ.

ಇನ್ನು ಅಕ್ಷತಾ ಮತ್ತು ಸುನಕ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಪರಿಚಯವಾಗಿ ಬಳಿಕ ವಿವಾಹವಾಗಿದ್ದಾರೆ. ಸದ್ಯ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಕ್ಷತಾ ಅವರು ತಮ್ಮ ತಂದೆಯ ಹೂಡಿಕೆ ಸಂಸ್ಥೆಯಾದ ಕ್ಯಾಟಮಾರನ್ ವೆಂಚರ್ಸ್‌ನ ನಿರ್ದೇಶಕರಾಗಿದ್ದಾರೆ. ಜೊತೆಗೆ ತಮ್ಮದೇ ಆದ ಫ್ಯಾಷನ್ ಲೇಬಲ್ ಅನ್ನು ಸಹ ನಿರ್ವಹಿಸುತ್ತಿದ್ದಾರೆ. ಕ್ಯಾಟಮಾರನ್‌ನಲ್ಲಿನ ಷೇರುಗಳು £430m ಮೌಲ್ಯದ್ದಾಗಿದ್ದು, ಅವರನ್ನು ಬ್ರಿಟನ್‌ನ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು ಎಂದು ಗುರುತಿಸಲಾಗಿದೆ. ಸದ್ಯ ಇವರು ಉತ್ತರ ಯಾರ್ಕ್‌ಷೈರ್‌ನ ನಾರ್ತಲರ್ಟನ್‌ಗೆ ಸಮೀಪವಿರುವ ಕಿರ್ಬಿ ಸಿಗ್ಸ್ಟನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಸೆಂಟ್ರಲ್ ಲಂಡನ್‌ನ ಕೆನ್ಸಿಂಗ್‌ಟನ್‌ನಲ್ಲಿ ಮನೆ, ಲಂಡನ್‌ನ ಓಲ್ಡ್ ಬ್ರಾಂಪ್ಟನ್ ರಸ್ತೆಯಲ್ಲಿ ಫ್ಲಾಟ್ ಮತ್ತು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಪೆಂಟ್‌ಹೌಸ್ ಅಪಾರ್ಟ್ಮೆಂಟ್ ಹೊಂದಿದ್ದಾರೆ. 

ರಾಜಕೀಯ ಜೀವನ: 
2020ರಿಂದ ಬ್ರಿಟನ್‌ ಸರ್ಕಾರದಲ್ಲಿ ಖಜಾನೆಯ ಚಾನ್ಸೆಲರ್ ಆಗಿ ರಿಷಿ ಸುನಕ್‌ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ 2015ರಿಂದ ರಿಚ್ಮಂಡ್‌ನ ಸಂಸದರಾಗಿಯೂ ಕೆಲಸ ಮಾಡುತ್ತಿದ್ದಾರೆ. 2015ರ ಸಾರ್ವತ್ರಿಕ ಚುನಾವಣೆಯಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಚುನಾಯಿತರಾದ ಅವರು ಥೆರೆಸಾ ಮೇ ಅವರ ಎರಡನೇ ಸರ್ಕಾರದಲ್ಲಿ ಸ್ಥಳೀಯ ಸರ್ಕಾರದ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಮೇ ಅವರ ಬ್ರೆಕ್ಸಿಟ್ ವಾಪಸಾತಿ ಒಪ್ಪಂದದ ಪರವಾಗಿ ಅವರು ಮೂರು ಬಾರಿ ಮತ ಚಲಾಯಿಸಿದ್ದರು. ಮೇ ರಾಜೀನಾಮೆ ನೀಡಿದ ನಂತರ, ಸುನಕ್ ಕನ್ಸರ್ವೇಟಿವ್ ನಾಯಕನಾಗಿ ಬೋರಿಸ್ ಜಾನ್ಸನ್ ಅವರ ಪ್ರಚಾರ ಕಾರ್ಯಗಳಿಗೆ ಸಹಕರಿಸಿದ್ದರು. ಜಾನ್ಸನ್ ಪ್ರಧಾನಮಂತ್ರಿಯಾಗಿ ನೇಮಕಗೊಂಡ ನಂತರ, ಸುನಕ್‌ರನ್ನು ಖಜಾನೆಯ ಚಾನ್ಸೆಲರ್ ಆಗಿ ನೇಮಿಸಲಾಯಿತು. ಇನ್ನು ಚಾನ್ಸಲರ್‌ ಆಗಿ ನೇಮಕಗೊಂಡ ಸುನಕ್‌, ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಲಾಕ್‌ಡೌನ್‌ ವಿಧಿಸಿ, ಜನರಿಗೆ ಅವಶ್ಯಕ ಸಹಾಯಗಳನ್ನು ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದರು. 

ಸುನಕ್ ಅವರು 2017ರ ಸಾರ್ವತ್ರಿಕ ಚುನಾವಣೆಯಲ್ಲಿ 23,108 (40.5%) ಮತಗಳನ್ನು ಪಡೆಯುವ ಮೂಲಕ ಮರು ಚುನಾಯಿತರಾದರು. 2019ರ ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಅವರನ್ನು ಸುನಕ್‌ ಬೆಂಬಲಿಸಿದ್ದರು ಮತ್ತು ಜೂನ್‌ನಲ್ಲಿ ನಡೆದ ಪ್ರಚಾರದ ಸಮಯದಲ್ಲಿ ಜಾನ್ಸನ್ ಪರವಾಗಿ ವಕಾಲತ್ತು ವಹಿಸಲು ಸಹ ಸಂಸದರಾದ ರಾಬರ್ಟ್ ಜೆನ್ರಿಕ್ ಮತ್ತು ಆಲಿವರ್ ಡೌಡೆನ್ ಅವರೊಂದಿಗೆ ಟೈಮ್ಸ್ ಪತ್ರಿಕೆಯಲ್ಲಿ ಲೇಖನವನ್ನು ಸಹ ಬರೆದರು. 

ಸುನಕ್ ಅವರನ್ನು ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರು 24 ಜುಲೈ 2019ರಂದು ಖಜಾನೆಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದರು. ಚಾನ್ಸೆಲರ್ ಸಾಜಿದ್ ಜಾವಿದ್ ಅವರ ಅಡಿಯಲ್ಲಿ ಸೇವೆ ಸಲ್ಲಿಸಿದರು. ಇನ್ನು 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 27,210 (47.2%) ಹೆಚ್ಚಿನ ಬಹುಮತದೊಂದಿಗೆ ಮರು ಆಯ್ಕೆಯಾದರು. ಚುನಾವಣಾ ಪ್ರಚಾರದ ಸಮಯದಲ್ಲಿ, ಸುನಕ್ ಬಿಬಿಸಿ ಮತ್ತು ಐಟಿವಿಯ ಏಳು ಮಾರ್ಗ ಚುನಾವಣಾ ಚರ್ಚೆಗಳಲ್ಲಿ ಕನ್ಸರ್ವೇಟಿವ್‌ಗಳನ್ನು ಪ್ರತಿನಿಧಿಸಿದ್ದರು. ಕ್ಯಾಬಿನೆಟ್ ಪುನರ್‌ರಚನೆಯ ಭಾಗವಾಗಿ 13 ಫೆಬ್ರವರಿ 2020ರಂದು ಸುನಕ್ ಅವರನ್ನು ಚಾನ್ಸೆಲರ್ ಆಗಿ ಬಡ್ತಿ ಮಾಡಲಾಯಿತು. 

ಇದನ್ನು ಓದಿ: Largest Comet Towards Earth: ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಇದುವರೆಗಿನ ಅತಿ ದೊಡ್ಡ ಧೂಮಕೇತು

ಸುನಕ್ ಅವರು ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದ್ದು 11 ಮಾರ್ಚ್, 2020ರಂದು. ಇದು £30 ಶತಕೋಟಿ ಹೆಚ್ಚುವರಿ ವೆಚ್ಚದ ಘೋಷಣೆಯನ್ನು ಒಳಗೊಂಡಿತ್ತು ಎಂಬುದು ವಿಶೇಷ. ಅದರಲ್ಲಿ £12 ಶತಕೋಟಿ ಕೊರೊನಾ ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳನ್ನು ತಗ್ಗಿಸಲು ವ್ಯಯಿಸಲಾಗಿತ್ತು. ಇನ್ನು  2021ರಲ್ಲಿ ಸುನಕ್‌ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಇದ್ದರೂ ಸಹ ಕಾಲ ಕಳೆದಂತೆ ಪ್ರಸಿದ್ಧಿ ಕುಸಿಯುತ್ತಾ ಬಂದಿತ್ತು.
 

Trending News