ಭಾರತಕ್ಕೆ ಕಳವಳ ತಂದ ಮಾಲ್ಡೀವ್ಸ್‌ಗೆ ಚೀನಾ ನೌಕೆಯ ಭೇಟಿ

Written by - Girish Linganna | Last Updated : Feb 8, 2024, 07:19 PM IST
  • 2014ರಲ್ಲಿ, ಚೀನಾ ನೌಕಾಪಡೆಗೆ ಸೇರಿದ ಸಬ್‌ಮರೀನ್ ಕೊಲಂಬೋದಲ್ಲಿ ನಿಲುಗಡೆಯಾಗಿತ್ತು.
  • ಇನ್ನು ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಚೀನಾದ ಎರಡು ಸಂಶೋಧನಾ ನೌಕೆಗಳು ಭಾರತದ ದಕ್ಷಿಣದ ತುದಿಗೆ ಸನಿಹದಲ್ಲಿರುವ ಶ್ರೀಲಂಕಾಗೆ ಭೇಟಿ ನೀಡಿದ್ದವು.
  • ಈ ಕ್ರಮಗಳು ಸಹಜವಾಗಿಯೇ ಭಾರತವನ್ನು ಕೆರಳಿಸಿದ್ದವು.
ಭಾರತಕ್ಕೆ ಕಳವಳ ತಂದ ಮಾಲ್ಡೀವ್ಸ್‌ಗೆ ಚೀನಾ ನೌಕೆಯ ಭೇಟಿ title=

ಚೀನಾದ ವೈಜ್ಞಾನಿಕ ಅನ್ವೇಷಣಾ ನೌಕೆ ಈ ವಾರ ಮಾಲ್ಡೀವ್ಸ್‌ನಲ್ಲಿ ಡಾಕಿಂಗ್ ನಡೆಸಲು ಉದ್ದೇಶಿಸಿರುವುದು ಬೀಜಿಂಗ್, ನವದೆಹಲಿ, ಮತ್ತು ಮಾಲೆಯ ನಡುವೆ ಸಾಕಷ್ಟು ಉದ್ವಿಗ್ನತೆ ಉಂಟುಮಾಡಿದೆ.

ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ 3 ಅಧಿಕೃತವಾಗಿ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿದ್ದು, ಇದು ಸಿಬ್ಬಂದಿಗಳ ಬದಲಾವಣೆ ಮತ್ತು ದಾಸ್ತಾನುಗಳ ಮರುಪೂರಣದ ಉದ್ದೇಶ ಹೊಂದಿದ್ದು, ಸಂಪೂರ್ಣವಾಗಿ ನಿರುಪದ್ರವಿ ಭೇಟಿ ಮತ್ತು ಕಾರ್ಯಾಚರಣೆಯಾಗಿದೆ ಎಂದು ಬೀಜಿಂಗ್ ಹೇಳಿಕೆ ನೀಡಿದೆ.

ಆದರೆ ನವದೆಹಲಿ ಈ ನೌಕೆಯ ಮಾಲ್ಡೀವ್ಸ್ ಭೇಟಿಯನ್ನು ಭಿನ್ನವಾಗಿ ಪರಿಗಣಿಸುತ್ತಿದೆ. ಏನಿಲ್ಲವೆಂದರೂ, ಭಾರತ ಇದನ್ನು ತನಗೆ ತೋರಿಸಲಾಗುತ್ತಿರುವ ಅಗೌರವ ಎಂದು ಪರಿಗಣಿಸಿದೆ. ಭಾರತ ಗಂಭೀರ ಪರಿಸ್ಥಿತಿಯಲ್ಲಿ, ಈ ನೌಕೆ ಭಾರತದ ಸಬ್‌ಮರೀನ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆಹಾಕಿ, ಚೀನಾ ಮಿಲಿಟರಿಗೆ ನೆರವಾಗುವ ಸಾಧ್ಯತೆಗಳಿವೆ ಎಂದು ಆತಂಕ ಹೊಂದಿದೆ. ಆದರೆ ಚೀನಾದ ತಜ್ಞರು ಇಂತಹ ಕಳವಳಗಳನ್ನು ತಳ್ಳಿ ಹಾಕಿದ್ದಾರೆ.

"ಚೀನಾದ ನೌಕೆಗಳು ಹಿಂದೂ ಮಹಾಸಾಗರದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳುತ್ತಿವೆ. ಅಂತಾರಾಷ್ಟ್ರೀಯ ಸಮುದ್ರಗಳಲ್ಲಿ ಚೀನೀ ನೌಕೆಗಳ ಚಟುವಟಿಕೆಗಳು ಸಂಪೂರ್ಣವಾಗಿ ಕಾನೂನುಬದ್ಧವಾಗಿವೆ" ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಯ ಹಿರಿಯ ನಿವೃತ್ತ ಕೊಲೊನೆಲ್ ಜ಼ೌ ಬೋ ಅಭಿಪ್ರಾಯ ಪಟ್ಟಿದ್ದಾರೆ.

"ಕಾಲ ಕಾಲಕ್ಕೆ, ಈ ನೌಕೆಗಳಿಗೆ ಇಂಧನ, ಆಹಾರ ಮತ್ತು ನೀರಿನ ಮರುಪೂರೈಕೆ ನಡೆಸಬೇಕಾಗುತ್ತದೆ. ಅದಕ್ಕಾಗಿ ಬೇರೆ ದೇಶಗಳಿಗೆ ಸೇರಿದ ಬಂದರುಗಳಲ್ಲಿ ಡಾಕಿಂಗ್ ನಡೆಸುವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದ್ದರಿಂದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಅನವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಬಾರದು. ಹಿಂದೂ ಮಹಾಸಾಗರ ಕೇವಲ ಭಾರತಕ್ಕೆ ಸೇರಿದ್ದಲ್ಲ" ಎಂದು ಪ್ರಸ್ತುತ ಬೀಜಿಂಗ್‌ನ ತ್ಸಿಂಗುವಾ ವಿಶ್ವವಿದ್ಯಾಲಯದಲ್ಲಿ ಕಾರ್ಯಾಚರಿಸುವ ಜ಼ೌ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಭಾರತದೊಡನೆ ಹಿಮಾಲಯ ಪ್ರದೇಶದ ಗಡಿಗಳಲ್ಲಿ ಉದ್ವಿಗ್ನತೆ ಹೊಂದಿರುವ ಚೀನಾ ಹಿಂದೂ ಮಹಾಸಾಗರದಲ್ಲಿ ಭಾರತಕ್ಕೆ ಸೇರಿದ ಸಮುದ್ರ ಪ್ರದೇಶದ ಬಳಿಗೆ ತನ್ನ ನೌಕೆಗಳನ್ನು ಕಳುಹಿಸಿ, ಭಾರತದೊಡನೆ ಇನ್ನಷ್ಟು ತಳಮಳ ಸೃಷ್ಟಿಸಿರುವುದು ಇದೇ ಮೊದಲ ಬಾರಿಯೇನಲ್ಲ.

2014ರಲ್ಲಿ, ಚೀನಾ ನೌಕಾಪಡೆಗೆ ಸೇರಿದ ಸಬ್‌ಮರೀನ್ ಕೊಲಂಬೋದಲ್ಲಿ ನಿಲುಗಡೆಯಾಗಿತ್ತು. ಇನ್ನು ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಚೀನಾದ ಎರಡು ಸಂಶೋಧನಾ ನೌಕೆಗಳು ಭಾರತದ ದಕ್ಷಿಣದ ತುದಿಗೆ ಸನಿಹದಲ್ಲಿರುವ ಶ್ರೀಲಂಕಾಗೆ ಭೇಟಿ ನೀಡಿದ್ದವು. ಈ ಕ್ರಮಗಳು ಸಹಜವಾಗಿಯೇ ಭಾರತವನ್ನು ಕೆರಳಿಸಿದ್ದವು.

ಚೀನಾ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಬಿಲಿಯನ್ ಗಟ್ಟಲೆ ಡಾಲರ್‌ಗಳ ಸಾಲ ನೀಡಿ, ಆ ದೇಶದೊಡನೆ ತನ್ನ ಸಂಬಂಧವನ್ನು ವೃದ್ಧಿಸಿಕೊಂಡಿದ್ದ ಅವಧಿಯಲ್ಲಿ ಈ ಭೇಟಿಗಳು ನಡೆದಿದ್ದವು.

ಚೀನಾದ ಸಂಶೋಧನಾ ನೌಕೆ, ಕ್ಸಿಯಾಂಗ್ ಯಾಂಗ್ ಹಾಂಗ್ 3 ಮೊದಲಿಗೆ ಮಾಲ್ಡೀವ್ಸ್‌ಗೆ ತೆರಳುವ ಮುನ್ನ ತನ್ನ ಮರುಪೂರೈಕೆಗಳಿಗಾಗಿ ಕೊಲಂಬೋದಲ್ಲಿ ನಿಲುಗಡೆಯಾಗುವ ಉದ್ದೇಶ ಹೊಂದಿತ್ತು. ಆದರೆ ಈ ಉದ್ದೇಶಕ್ಕೆ ತಾತ್ಕಾಲಿಕ ನಿಲುಗಡೆ ತರಲಾಗಿದೆ. ಶ್ರೀಲಂಕಾದ ವಿದೇಶಾಂಗ ಖಾತೆ ಉಪ ಸಚಿವರಾದ ತಾರಕ ಬಾಲಸೂರ್ಯ ಅವರು ಈ ಕುರಿತು ಹೇಳಿಕೆ ನೀಡಿದ್ದು, "ಕಳೆದ ಕೆಲವು ವರ್ಷಗಳಿಂದ, ಇಂತಹ ಸಂಶೋಧನೆಗಳಲ್ಲಿ ಸಮಾನವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ನಾವು ನಮ್ಮ ತಂತ್ರಜ್ಞಾನಗಳು ಮತ್ತು ಕೌಶಲಗಳನ್ನು ವೃದ್ಧಿಸಲು ಪ್ರಯತ್ನ ನಡೆಸುತ್ತಿದ್ದೇವೆ" ಎಂದಿದ್ದಾರೆ.

ಆದರೆ, ಚೀನಾದ ಸಂಶೋಧನಾ ನೌಕೆಗಳು ಶ್ರೀಲಂಕಾಗೆ ಬರದಂತೆ ತಡೆದಿರುವುದು, ತನ್ನ ಪ್ರದೇಶದ ಬಳಿ ಚೀನೀ ನೌಕೆಗಳ ಉಪಸ್ಥಿತಿಯ ಕುರಿತು ಭಾರತ ಹೊಂದಿರುವ ಭಾರೀ ಪ್ರತಿರೋಧದ ಕಾರಣದಿಂದಾಗಿದೆ ಎಂದು ಭಾವಿಸಲಾಗಿದೆ.

ಆದರೆ, ಭಾರತದ ಪ್ರತಿರೋಧಗಳು ಮಾಲ್ಡೀವ್ಸ್‌ನ ಪರಿಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮಗಳನ್ನು ಉಂಟುಮಾಡಿಲ್ಲ. 1,200 ಹವಳ ದ್ವೀಪಗಳನ್ನು ಹೊಂದಿರುವ, ಹಿಂದೂ ಮಹಾಸಾಗರದ ಹೃದಯ ಭಾಗದಲ್ಲಿರುವ ಮಾಲ್ಡೀವ್ಸ್, ಐತಿಹಾಸಿಕವಾಗಿಯೂ ಭಾರತದ ಪ್ರಭಾವವನ್ನು ಹೊಂದಿತ್ತು. ಆದರೆ, ನವೆಂಬರ್ ತಿಂಗಳಲ್ಲಿ ಮಾಲ್ಡೀವ್ಸ್ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮದ್ ಮುಯಿಝು ಅವರು ಚೀನಾ ಪರ ಧೋರಣೆ ಹೊಂದಿದ್ದಾರೆ ಎನ್ನಲಾಗಿದ್ದು, ಮಾಲ್ಡೀವ್ಸ್‌ನ ಭಾರತ ಪರ ನಿಲುವನ್ನು ಬದಲಾಯಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಮುಯಿಝು ಅವರ ಚುನಾವಣಾ ಪ್ರಚಾರ 'ಇಂಡಿಯಾ ಔಟ್' ಎಂಬ ಘೋಷಣೆಯ ಮೇಲೆ ಆಧಾರಿತವಾಗಿದ್ದು, ಅವರು ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಬಹುತೇಕ 80 ಜನ ಭಾರತೀಯ ಸೈನಿಕರನ್ನು ಭಾರತ ಮರಳಿ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಭಾರತ ಈ ಸೈನಿಕರನ್ನು ಮಾಲ್ಡೀವ್ಸ್‌ನಲ್ಲಿ ಸೇವೆಯ ಉದ್ದೇಶಕ್ಕಾಗಿ, ಮತ್ತು ಹಲವು ವರ್ಷಗಳ ಹಿಂದೆ ಮಾಲ್ಡೀವ್ಸ್‌ಗೆ ದೆಹಲಿ ಒದಗಿಸಿರುವ ಕಣ್ಗಾವಲು ಮತ್ತು ನೆರವಿನ ಉದ್ದೇಶದ ಮೂರು ವಿಮಾನಗಳನ್ನು ನಿರ್ವಹಿಸುವ ಸಲುವಾಗಿ ಮಾಲ್ಡೀವ್ಸ್‌ನಲ್ಲಿ ಇರಿಸಿತ್ತು.

ಮಾಲ್ಡೀವ್ಸ್ ಸರ್ಕಾರ, ತನ್ನ ಸಂಸದೀಯ ಚುನಾವಣೆಗಳಿಗೆ ಎರಡು ದಿನಗಳ ಮುಂಚಿತವಾಗಿ, ಅಂದರೆ, ಮಾರ್ಚ್ 15ರ ಮುನ್ನ ಭಾರತೀಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ನವದೆಹಲಿಗೆ ಗಡುವು ನೀಡಿದೆ.

ಕಳೆದ ವಾರ ದೆಹಲಿಯಲ್ಲಿ ನಡೆದ ಮಾತುಕತೆಯ ಬಳಿಕ, ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ಭಾರತ ಮಾರ್ಚ್ 10ರ ವೇಳೆಗೆ ಮೊದಲ ಹಂತದಲ್ಲಿ ಭಾರತೀಯ ಸೈನಿಕರನ್ನು ಮರಳಿ ಕರೆಸಿಕೊಳ್ಳಲು ಒಪ್ಪಿಗೆ ನೀಡಿದೆ ಎಂದಿದೆ. ಇನ್ನುಳಿದ ಸೈನಿಕರನ್ನು ಮೇ ಎರಡನೇ ವಾರದ ವೇಳೆಗೆ ಭಾರತಕ್ಕೆ ಮರಳಿ ಕರೆಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಡಿಸೆಂಬರ್ ತಿಂಗಳಲ್ಲಿ, ಮುಯಿಝು ಆಡಳಿತ ತಾನು ಭಾರತದ ಜೊತೆಗೆ ಹೈಡ್ರೋಗ್ರಾಫಿಕ್ ಸರ್ವೇ ಗುತ್ತಿಗೆಯನ್ನು ಮುಂದುವರಿಸುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದೆ. ಮಾಲ್ಡೀವ್ಸ್‌ನ ಹಿಂದಿನ ಸರ್ಕಾರ ಮಾಲ್ಡೀವ್ಸ್ ಸಮುದ್ರದ ತಳದ ನಕ್ಷೆ ರಚಿಸಲು ಭಾರತದೊಡನೆ ಈ ಯೋಜನೆ ರೂಪಿಸಿತ್ತು.

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಈಗ ಯಾವ ಮಟ್ಟಿಗೆ ಹದಗೆಟ್ಟಿದೆಯೆಂದರೆ, ಮಾಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾಲ್ಡೀವ್ಸ್ ಸರ್ಕಾರದ ಯಾವುದೇ ಉನ್ನತಾಧಿಕಾರಿಗಳು ಉಪಸ್ಥಿತರಿರಲಿಲ್ಲ.

ಐದು ದಿನಗಳ ಅಧಿಕೃತ ಭೇಟಿಗಾಗಿ ಚೀನಾಗೆ ತೆರಳಿದ್ದ ಮುಯಿಝು ಅವರನ್ನು ಬೀಜಿಂಗ್ ಹಾರ್ದಿಕವಾಗಿ ಸ್ವಾಗತಿಸಿತ್ತು. ಮುಯಿಝು ಭೇಟಿಯ ಬೆನ್ನಲ್ಲೇ, ಚೀನಾದ ಹಲವು ಉನ್ನತ ಅಧಿಕಾರಿಗಳು ಮಾಲ್ಡೀವ್ಸ್‌ಗೆ ಭೇಟಿ ನೀಡಿದರು. ಮುಯಿಝು ಸಹ ಚೀನಾದ ಹೂಡಿಕೆಯ ನೆರವಿನಿಂದ ಸಾಕಷ್ಟು ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಚೀನಾದ ಕುರಿತಂತೆ ಇದ್ದಕ್ಕಿದ್ದ ಹಾಗೇ ಬದಲಾದ ಮಾಲೆಯ ಧೋರಣೆ, ಮಾಲ್ಡೀವ್ಸ್ ಅನ್ನು ಕಾರ್ಯತಂತ್ರದ ನಿಟ್ಟಿನಲ್ಲಿ ಪ್ರಮುಖ ದೇಶವಾಗಿ ಪರಿಗಣಿಸಿರುವ ನವದೆಹಲಿಯ ಚಿಂತೆಗೆ ಕಾರಣವಾಗಿದೆ.

ಚೀನಾದ ನೌಕಾಪಡೆಯ ಸಾಮರ್ಥ್ಯವೂ ವ್ಯಾಪಕವಾಗಿ ಹೆಚ್ಚುತ್ತಿದ್ದು, ಅದು ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ಮಾಲ್ಡೀವ್ಸ್‌ಗೆ ಪ್ರವೇಶ ಪಡೆಯಲು ಪ್ರಯತ್ನ ನಡೆಸುವ ಸಾಧ್ಯತೆಗಳಿವೆ. ಭಾರತ ಇಂತಹ ಸಾಧ್ಯತೆಗಳನ್ನು ತಡೆಗಟ್ಟಲು ತನ್ನ ಪ್ರಯತ್ನಗಳನ್ನು ನಡೆಸುತ್ತಿದೆ.

"ಮಾಲ್ಡೀವ್ಸ್ ಖಂಡಿತವಾಗಿಯೂ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಅದು ಒಂದು ರೀತಿಯಲ್ಲಿ ಭಾರತದ ದಕ್ಷಿಣ ಸಮುದ್ರದ ಬದಿಯಂತಿದೆ" ಎಂದು ಈ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯಾಚರಿಸಿದ್ದ ಶ್ಯಾಮ್ ಸರಣ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಈ ಹಿಂದೆ ಭಾರತ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಕುರಿತು ಚಿಂತಿತವಾಗಿತ್ತು. ಅದೇ ರೀತಿಯಲ್ಲಿ, ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೂ ಭಾರತದ ಚಿಂತೆಗೆ ಕಾರಣವಾಗಿವೆ" ಎಂದು ಸರಣ್ ಹೇಳಿದ್ದಾರೆ.

ಪ್ರಸ್ತುತ ಮಾಲ್ಡೀವ್ಸ್ ಜೊತೆಗಿನ ಸಂಬಂಧದ ಕುರಿತು ಭಾರತ ಮಾತ್ರವೇ ಚಿಂತೆ ಹೊಂದಿಲ್ಲ. ಮಾಲ್ಡೀವ್ಸ್‌ನ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಮತ್ತು ಇತರರು ಮುಯಿಝು ಸರ್ಕಾರವನ್ನು ಅದು ಸಾಗುತ್ತಿರುವ ದಿಕ್ಕಿನಿಂದ ಬದಲಾಗಲು ಆಗ್ರಹಿಸುತ್ತಿದ್ದಾರೆ. ಅವರು ಭಾರತದಂತಹ ದೊಡ್ಡ ನೆರೆರಾಷ್ಟ್ರವನ್ನು ಅಸಮಾಧಾನಗೊಳಿಸುವುದು ಮಾಲ್ಡೀವ್ಸ್ ಮತ್ತು ಅದರ ಆರ್ಥಿಕತೆಗೆ ಒಳಿತಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಕಳೆದ ವಾರ, ಎಂಡಿಪಿ ನಾವು ಮುಯಿಝು ಅವರನ್ನು ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಪದಚ್ಯುತಗೊಳಿಸುವ ಆಯ್ಕೆಯನ್ನೂ ಆಲೋಚಿಸುತ್ತಿದ್ದೇವೆ ಎಂದಿದ್ದರು.

ಒಂದು ಸಣ್ಣ ದ್ವೀಪ ರಾಷ್ಟ್ರವಾಗಿರುವ ಮಾಲ್ಡೀವ್ಸ್, ತನ್ನ ಆಹಾರ ವಸ್ತುಗಳ ಪೂರೈಕೆ, ಮೂಲಭೂತ ವ್ಯವಸ್ಥೆಗಳ ನಿರ್ಮಾಣ, ಮತ್ತು ತಾಂತ್ರಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಭಾರತದ ಮೇಲೆ ಅಪಾರ ಪ್ರಮಾಣದ ಅವಲಂಬನೆಯನ್ನು ಹೊಂದಿದೆ. ಅದರೊಡನೆ, ಬಹಳಷ್ಟು ಸಂಖ್ಯೆಯಲ್ಲಿ ಮಾಲ್ಡೀವಿಯನ್ನರು ವೈದ್ಯಕೀಯ ಸೇವೆಗಾಗಿ ಭಾರತಕ್ಕೆ ಬರುತ್ತಾರೆ.

"ಮಾಲ್ಡೀವ್ಸ್ ನಾಗರಿಕರು ಮಾಲ್ಡೀವ್ಸ್ ಸರ್ಕಾರ ತನ್ನ ಭಾರತ ವಿರೋಧಿ ಧೋರಣೆಯನ್ನು ಮಿತಿಮೀರಿ ಮುಂದುವರಿಸಿದೆ ಎಂದು ಭಾವಿಸಿದ್ದಾರೆ. ಇದು ನಿಜವಾಗಿಯೂ ಅನವಶ್ಯಕ ಬೆಳವಣಿಗೆಯಾಗಿತ್ತು ಎಂದು ಅವರ ಅಭಿಪ್ರಾಯವಾಗಿದೆ" ಎಂದು ವಿಪಕ್ಷ ಎಂಡಿಪಿ ಸದಸ್ಯರು, ಮಾಲೆಯ ವಕೀಲರೂ ಆದ ಆಯ್ಕ್ ಅಹ್ಮದ್ ಈಸಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಮಾಲ್ಡೀವ್ಸ್ ಒಂದು ಸಣ್ಣ ರಾಷ್ಟ್ರ. ಆದರೆ ನಾವು ಈಗ ಎರಡು ಬೃಹತ್ ಏಷ್ಯನ್ ಶಕ್ತಿಗಳ ನಡುವಿನ ಸ್ಪರ್ಧೆಯಲ್ಲಿ ಸಿಲುಕಿದಂತಾಗಿದ್ದು, ಪರಿಸ್ಥಿತಿ ಈಗ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ" ಎಂದು ಅವರು ಸರಳವಾಗಿ ವಿವರಿಸಿದ್ದಾರೆ.

ತಜ್ಞರ ಪ್ರಕಾರ, ಚೀನಾ ತನ್ನ ಕಾರ್ಯತಂತ್ರದ ಗುರಿಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು, ಸಾಗರಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳು ಮತ್ತು ತನ್ನ ವಾಣಿಜ್ಯಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಹಿಂದೂ ಮಹಾಸಾಗರದಲ್ಲಿ ಇನ್ನಷ್ಟು ನೌಕೆಗಳನ್ನು ಕಾರ್ಯಾಚರಿಸುವ ಗುರಿ ಹೊಂದಿದೆ. ಭಾರತಕ್ಕೆ ಈಗ ಹಿಂದೂ ಮಹಾಸಾಗರದಲ್ಲಿ ತನ್ನದು ಎಂದು ಭಾವಿಸಿರುವ ಪ್ರದೇಶದಲ್ಲಿ ಚೀನಾದ ಪಾರಮ್ಯ ಹೆಚ್ಚಾಗದಂತೆ ತಡೆಯುವ ಗುರಿ ಎದುರಾಗಿದೆ.

ಜೌ಼ ಅವರ ಪ್ರಕಾರ, ಚೀನಾದ ವಿಮಾನ ವಾಹಕ ನೌಕೆಗಳು ಮತ್ತು ಅವುಗಳ ಜೊತೆಗಾರ ನೌಕೆಗಳು ಕ್ರಮೇಣ ಹಿಂದೂ ಮಹಾಸಾಗರವನ್ನು ತಲುಪಲಿವೆ. ಒಂದು ವೇಳೆ ಭಾರತ ಏನಾದರೂ ಶ್ರೀಲಂಕಾದಂತಹ ಮೂರನೇ ದೇಶದಲ್ಲೂ ಈ ನೌಕೆಗಳ ಮರುಪೂರಣಕ್ಕೆ ಅಡ್ಡಿಪಡಿಸಿದರೆ, ಅದು ಸಹಜವಾಗಿಯೇ ಬೀಜಿಂಗ್‌ಗೆ ಕೋಪ ತರಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News