ಸರ್ವಾಧಿಕಾರಿ ಪುಟಿನ್ ಮತ್ತವರ ಜೀವಭಯ: ಮಾಜಿ ರಕ್ಷಣಾ ಅಧಿಕಾರಿಗಳು ಬಯಲಿಗೆಳೆದ ರಹಸ್ಯಗಳು

ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್‌ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ.

Written by - Girish Linganna | Edited by - Manjunath Naragund | Last Updated : Sep 16, 2023, 08:59 PM IST
  • ರಷ್ಯಾದ ಸರ್ವಾಧಿಕಾರಿ ನಾಯಕ ಈಗ ಭೂಗರ್ಭ ಬಂಕರ್‌ಗಳನ್ನು ಹೊಂದಿರುವ ಅರಮನೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
  • ಕ್ರಿಮಿಯಾದಲ್ಲಿನ ಅವರ ನಿವಾಸ ಒಲಿವ್ಯೇ ಸೆವಾಸ್ಟೊಪೋಲ್‌ನ ದಕ್ಷಿಣ ಭಾಗದಲ್ಲಿದೆ.
  • ಈ ಪ್ರದೇಶದ ಮೇಲೆ ಉಕ್ರೇನ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇದು ಹೊಂದಿರುವ ಸುದೀರ್ಘ ಕರಾವಳಿಯನ್ನು ಜಾರ್ ಚಕ್ರವರ್ತಿಗಳೂ ಇಷ್ಟಪಟ್ಟಿದ್ದರು ಎನ್ನಲಾಗಿದೆ.
ಸರ್ವಾಧಿಕಾರಿ ಪುಟಿನ್ ಮತ್ತವರ ಜೀವಭಯ: ಮಾಜಿ ರಕ್ಷಣಾ ಅಧಿಕಾರಿಗಳು ಬಯಲಿಗೆಳೆದ ರಹಸ್ಯಗಳು title=
file photo

1.3 ಬಿಲಿಯನ್ ಡಾಲರ್ ಮೊತ್ತದಲ್ಲಿ, ಕಪ್ಪು ಸಮುದ್ರದ ಬಳಿ 190,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಿರುವ ಭವ್ಯ ಅರಮನೆಯಂತಹ ಬಂಗಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರದ್ದು. ಭಾರೀ ರಹಸ್ಯಾತ್ಮಕವಾಗಿ ಜೀವಿಸುವ ಪುಟಿನ್ ಅವರು ತನ್ನ ಬಂಗಲೆಯಲ್ಲಿ ಹಲವಾರು ರಹಸ್ಯ ಸುರಂಗಗಳ ಜಾಲವನ್ನೂ ಹೊಂದಿದ್ದಾರೆ. ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್‌ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ.

ಕಳೆದ ವರ್ಷ ಪಕ್ಷಾಂತರ ಮಾಡಿದ ರಷ್ಯಾದ ಹಿರಿಯ ಭದ್ರತಾ ಅಧಿಕಾರಿ, ಫೆಡರಲ್ ಪ್ರೊಟೆಕ್ಷನ್ ಸರ್ವಿಸ್ ಕ್ಯಾಪ್ಟನ್ ಆಗಿದ್ದ ಗ್ಲೆಬ್ ಕಾರಾಕುಲೊವ್ ಅವರು, ಇದ್ದಕ್ಕಿದ್ದಂತೆ ದಿನಗಟ್ಟಲೆ ಕಣ್ಮರೆಯಾಗುವುದಕ್ಕೆ ಪ್ರಸಿದ್ಧರಾಗಿರುವ ಅಧ್ಯಕ್ಷ ಪುಟಿನ್ ರಕ್ಷಣೆಗಾಗಿ ರಷ್ಯಾದ ವಿವಿಧ ನಗರಗಳಲ್ಲಿ ರಹಸ್ಯ ರೈಲ್ವೇ ಜಾಲ, ಒಂದೇ ರೀತಿಯ ಕಚೇರಿಗಳು, ಹಲವು ಪದರಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಹಾಗೂ ದಿನೇ ದಿನೇ ಹೆಚ್ಚಾಗುತ್ತಿರುವ ಭದ್ರತಾ ನಿಯಮಾವಳಿಗಳು, ರಹಸ್ಯ ಬಂಕರ್‌ಗಳಿವೆ ಎಂದಿದ್ದಾರೆ. ಈ ಎಲ್ಲ ಕ್ರಮಗಳನ್ನು ರಷ್ಯನ್ ಅಧ್ಯಕ್ಷರ ಆಗುಹೋಗುಗಳನ್ನು ತಡೆಯುವ ಸಲುವಾಗಿ ಕೈಗೊಳ್ಳಲಾಗಿದ್ದು, ಪುಟಿನ್ ತನ್ನ ಜೀವಕ್ಕೆ ಅತಿಯಾಗಿ ಹೆದರುವ ಗುಣ ಹೊಂದಿದ್ದಾರೆ ಎಂದು ಕಾರಾಕುಲೊವ್ ಹೇಳಿದ್ದಾರೆ.

ಕಣ್ಣಿಗೆ ಮಣ್ಣೆರಚುವ ವಿಮಾನಗಳು ಹಾಗೂ ಡಮ್ಮಿ ಬೆಂಗಾವಲು ಪಡೆಗಳು

ಪುಟಿನ್ ಅವರು ಸೈಂಟ್ ಪೀಟರ್ಸ್‌ಬರ್ಗ್ ಹಾಗೂ ನೋವೋ - ಒಗಾರ್‌ಯೊವೊಗಳಲ್ಲಿ ಅವಳಿ ಕಚೇರಿಗಳನ್ನು ಬಳಸುತ್ತಿದ್ದು, ಅವರ ಸೀಕ್ರೆಟ್ ಸರ್ವೀಸ್ ತಂಡ ಮೋಸಗೊಳಿಸುವ ಸಲುವಾಗಿ ವಿನಾಕಾರಣ ವಿಮಾನಗಳು ಹಾಗೂ ಡಮ್ಮಿ ಬೆಂಗಾವಲು ಪಡೆಗಳನ್ನು ಸಜ್ಜುಗೊಳಿಸಿ, ಪುಟಿನ್ ಎಲ್ಲಿಗೋ ತೆರಳುತ್ತಿದ್ದಾರೆ ಎಂಬ ಸುಳ್ಳು ಸಂದೇಶ ಹಬ್ಬುವಂತೆ ಮಾಡುತ್ತಾರೆ. ವಿದೇಶೀ ಬೇಹುಗಾರಿಕಾ ಇಲಾಖೆಗಳ ಕಣ್ಣು ತಪ್ಪಿಸಲು ಮತ್ತು ಸಂಭಾವ್ಯ ಹತ್ಯೆ ಯತ್ನಗಳನ್ನು ತಡೆಯಲು ಈ ಸುರಕ್ಷಾ ಕ್ರಮಗಳಿವೆ. ರಷ್ಯಾದಿಂದ ಹೊರನಡೆದಿರುವ ಇನ್ನೊರ್ವ ಫೆಡರಲ್ ಸೆಕ್ಯುರಿಟಿ ಅಧಿಕಾರಿ ಪುಟಿನ್ ಅವರು ಡಮ್ಮಿ ಬೆಂಗಾವಲು ಪಡೆ ವಾಹನಗಳನ್ನು ಸೋಚಿ ಬಳಿ ಇರುವ ತನ್ನ ನಿವಾಸದ ಬಳಿಯಿಂದ ಕಳುಹಿಸಿ, ತಾನು ಮಾಸ್ಕೋಗೆ ತೆರಳುತ್ತಿದ್ದೇನೆ ಎಂಬ ಭಾವನೆ ಮೂಡಿಸುತ್ತಾರೆ ಎಂದಿದ್ದಾರೆ. ಸೋಚಿ ಎನ್ನುವುದು ನೈಋತ್ಯ ರಷ್ಯಾದಲ್ಲಿರುವ ಒಂದು ನಗರವಾಗಿದ್ದು, ಕಪ್ಪು ಸಮುದ್ರದ ತೀರದಲ್ಲಿದೆ. ಈ ಪ್ರದೇಶ ತನ್ನಲ್ಲಿರುವ ಸಾಗರ ತೀರದ ರೆಸಾರ್ಟ್‌ಗಳು ಮತ್ತು ಸುಂದರ ಭೂಪ್ರದೇಶಗಳಿಗಾಗಿ ಪ್ರಸಿದ್ಧವಾಗಿದೆ. ಇದೊಂದು, ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, 2014ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಿತ್ತು.

ರಷ್ಯಾದ ಮಾಜಿ ಭದ್ರತಾ ಅಧಿಕಾರಿ, ಪುಟಿನ್ ಅವರ ಕ್ರಿಮಿಯಾದ ಒಂದು ರಹಸ್ಯ ನಿವಾಸದಲ್ಲಿ ಭದ್ರತಾ ತಂಡದ ಭಾಗವೂ ಆಗಿದ್ದ ವಿಟಾಲಿ ಬ್ರಿಜಾ಼ಟಿಯ್ ಅವರು ಪುಟಿನ್ ಅವರ ಜೀವಭಯ ಎಷ್ಟರಮಟ್ಟಿಗಿದೆ ಎಂದು ವಿವರಿಸುತ್ತಾ, ಅವರು ತನ್ನ ನಿವಾಸದಲ್ಲಿ ಕೇವಲ ವಾಷಿಂಗ್ ಮೆಷಿನ್ ಬಳಿಯೇ ಓರ್ವ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದಾರೆ ಎಂದಿದ್ದರು. ಪುಟಿನ್ ಅವರು 2014ರಲ್ಲಿ ಉಕ್ರೇನ್ ಅಧೀನದಲ್ಲಿದ್ದ ಕ್ರಿಮಿಯಾವನ್ನು ವಶಪಡಿಸಿಕೊಂಡಿದ್ದು, ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಕ್ರಿಮಿಯಾವನ್ನು ಮರಳಿ ಪಡೆಯುವುದು ಉಕ್ರೇನಿನ ಗುರಿಯಾಗಿದೆ.

ಬ್ರಿಜಾ಼ಟಿಯ್ ಅವರು ರಷ್ಯಾದ ಒಂದು ಸ್ವತಂತ್ರ ವಾಹಿನಿಯೊಡನೆ ಮಾತನಾಡುತ್ತಾ, ಪುಟಿನ್ ಅವರು ತನ್ನ ಭದ್ರತೆಯ ಕುರಿತು ಅದೆಷ್ಟು ಕಳವಳಗಳನ್ನು ಹೊಂದಿದ್ದಾರೆ ಎಂದು ವಿವರಿಸಿದ್ದಾರೆ. ಈ ಮೊದಲು ಪುಟಿನ್ ಅವರ ಒಲಿವ್ಯೇ ಎಸ್ಟೇಟ್ ನಿವಾಸದಲ್ಲಿ ನಾಯಿಗಳ ಜವಾಬ್ದಾರಿ ಹೊಂದಿದ್ದ ಭದ್ರತಾ ಅಧಿಕಾರಿ ರಷ್ಯಾವನ್ನು ತೊರೆದು, ಈಗ ಈಕ್ವೆಡಾರ್‌ನಲ್ಲಿ ನೆಲೆಸಿದ್ದಾರೆ. ಅತಿಯಾದ ಜಾಗರೂಕತೆ ಹೊಂದಿರುವ ಪುಟಿನ್ ಅವರು ತನ್ನ ಖಾಸಗಿ ಸಮುದ್ರ ತೀರಗಳಲ್ಲಿ ಭದ್ರತೆಯನ್ನು ಖಾತ್ರಿಪಡಿಸಲು ಶಸ್ತ್ರಸಜ್ಜಿತ ಮುಳುಗುಗಾರರನ್ನೂ ಕಳುಹಿಸುತ್ತಾರೆ.

ಸ್ವಂತ ಭದ್ರತಾ ತಂಡದ ಮೇಲೂ ನಂಬಿಕೆಯಿಲ್ಲದ ಪುಟಿನ್

ಬ್ರಿಜಾ಼ಟಿಯ್ ಅವರು ಪುಟಿನ್ ತನ್ನ ಸ್ವಂತ ಭದ್ರತಾ ತಂಡದ ಮೇಲೂ ನಂಬಿಕೆ ಹೊಂದಿಲ್ಲ ಎಂದಿದ್ದಾರೆ. ಪುಟಿನ್ ಅವರು ತಾನು ಯಾವಾಗ ಕ್ರಿಮಿಯಾಗೆ ಬರುತ್ತೇನೆ, ಎಲ್ಲಿ ನೆಲೆಸುತ್ತೇನೆ ಎಂಬ ಕುರಿತು ತನ್ನ ರಕ್ಷಣಾ ಪಡೆಗಳಿಗೂ ಸುಳ್ಳು ಮಾಹಿತಿ ನೀಡುತ್ತಾರೆ. ಕ್ರಿಮಿಯಾ ಕಪ್ಪು ಸಮುದ್ರದ ಉತ್ತರ ತೀರದಲ್ಲಿದ್ದು, ಐತಿಹಾಸಿಕವಾಗಿಯೂ ಉಕ್ರೇನಿನ ಭಾಗವಾಗಿದೆ. ಆದರೆ ರಷ್ಯಾ ಅದನ್ನು 2014ರಲ್ಲಿ ಅತಿಕ್ರಮಿಸಿತು. ಈ ವಿಚಾರ ಇನ್ನೂ ಅಂತಾರಾಷ್ಟ್ರೀಯ ವಿವಾದವಾಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ವಿವಾದದ ಕಿಡಿ ಹಚ್ಚಿದೆ. "ಭದ್ರತಾ ತಂಡದವರಿಗೆ ಪುಟಿನ್ ಕ್ರಿಮಿಯಾದಲ್ಲಿನ ಡಚ್ಚಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭಿಸಿ, ಅವರು ಆ ಪ್ರದೇಶಕ್ಕೆ ಭದ್ರತೆ ಒದಗಿಸುತ್ತಿರುವಾಗ, ಪುಟಿನ್ ಅವರು ಸಂಪೂರ್ಣವಾಗಿ ಬೇರೆಯೇ ಜಾಗದಲ್ಲಿ ಇರುತ್ತಿದ್ದರು" ಎಂದು ವಿವರಿಸುತ್ತಾರೆ ಬ್ರಿಜಾ಼ಟಿಯ್. ರಷ್ಯನ್ ಭಾಷೆಯಲ್ಲಿ ಡಚ್ಚಾ ಎಂದರೆ ವಿರಾಮದ ಮನೆ ಎಂದರ್ಥ. ಇವು ಸಾಮಾನ್ಯವಾಗಿ ಸುಂದರ ಪರಿಸರದಲ್ಲಿರುತ್ತವೆ.

ಪುಟಿನ್ ಅವರ ಒಲಿವ್ಯೆ: ಒಂದು ಕನಸಿನ ನಗರ

ಕ್ರಿಮಿಯಾದಲ್ಲಿನ ಪುಟಿನ್ ಅವರ ಅರಮನೆ ಒಲಿವ್ಯೆಯನ್ನು ಅವರ ಮಾಜಿ ಭದ್ರತಾ ಅಧಿಕಾರಿ ಒಂದು ಐಷಾರಾಮಿ, 'ಸಣ್ಣ ನಗರ' ಎಂದು ಬಣ್ಣಿಸಿದ್ದಾರೆ. ಇದೊಂದು ಕನಸಿನ ಪ್ರದೇಶದಂತಿದ್ದು, ಅಲ್ಲಿ ಜಿಮ್, ಕಾರಂಜಿಗಳು, ಸುಂದರವಾದ ಉದ್ಯಾನವನಗಳು, ಟೀ ಹೌಸ್‌ಗಳು, ಬಾರ್ಬಿಕ್ಯೂ ಪ್ರದೇಶ, ಸಮುದ್ರ ತೀರಗಳಿವೆ ಎಂದು ಬ್ರಿಜಾ಼ಟಿಯ್ ವಿವರಿಸುತ್ತಾರೆ. ಆದರೆ ಸುರಕ್ಷತೆ ಪುಟಿನ್ ಅವರ ಅತಿದೊಡ್ಡ ಕಾಳಜಿಯ ವಿಚಾರವಾಗಿದ್ದು, ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ ಪುಟಿನ್ ಅವರ ಭದ್ರತೆಯನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಪುಟಿನ್ ಅವರ ಕಾವಲು ನಾಯಿಗಳ ಸಂಖ್ಯೆಯನ್ನು ಮೊದಲಿಗಿಂತ ಆರು ಪಟ್ಟು ಹೆಚ್ಚಿಸಲಾಗಿದೆ‌. ಬಹುತೇಕ ಮಿಲಿಟರೇತರ ಉದ್ಯೋಗಿಗಳಿಗೆ ಪುಟಿನ್ ನಿವಾಸದ ಬಳಿಗೆ ಪ್ರವೇಶ ನಿರಾಕರಿಸಲಾಗಿದೆ. ಅಲ್ಲಿಗೆ ಯಾರೇ ತೆರಳುವುದಾದರೂ, ಅವರ ಮೊಬೈಲ್ ಫೋನ್‌ಗಳನ್ನು ಒಳ ಪ್ರವೇಶಿಸುವ ಮೊದಲೇ ಹಸ್ತಾಂತರಿಸಬೇಕಾಗುತ್ತದೆ.

2018ರಿಂದ ತೆಗೆಯಲಾದ ಉಪಗ್ರಹ ಚಿತ್ರಗಳು ಈ ಪ್ರದೇಶದಲ್ಲಿ ಈಜುಕೊಳ, ಹೆಲಿಪ್ಯಾಡ್‌ಗಳನ್ನು ಒಳಗೊಂಡಿರುವ ಹಲವು ಮನೆಗಳನ್ನು ತೋರಿಸಿವೆ. ಈ ಮನೆಗಳ ಬಳಿ ಖಾಸಗಿ ಟೆನ್ನಿಸ್ ಮೈದಾನ, ಬೋಟ್‌ಗಳ ನಿಲುಗಡೆಗೆ ಸ್ಥಳಾವಕಾಶಗಳಿವೆ. ಬ್ರಿಜಾ಼ಟಿಯ್ ಈ ಸ್ಥಳಗಳನ್ನು ಪುಟಿನ್ ಅವರ ರಜೆಯ ನಿವಾಸಗಳು ಎಂದು ಕರೆಯುತ್ತಾರೆ. ಇದನ್ನು ಪುಟಿನ್ ಅವರು, ಅವರ ಸ್ನೇಹಿತರಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್, ಹಾಗೂ ಫೆಡರಲ್ ಸೆಕ್ಯುರಿಟಿ ಸರ್ವಿಸಸ್ ಆಫ್ ರಷ್ಯನ್ ಬೋರ್ಡ್ (ಎಫ್ಎಸ್‌ಬಿ) ಮುಖ್ಯಸ್ಥರಾದ ಅಲೆಕ್ಸಾಂಡರ್ ಬಾರ್ಟ್‌ನಿಕೋವ್ ಮತ್ತಿತರರು ಬಳಸುತ್ತಾರೆ. ಈ ಎಲ್ಲ ನಾಯಕರೂ ತಮ್ಮ ಆಕ್ರಮಣಕಾರಿ ನಿಲುವಿಗೆ ಪ್ರಸಿದ್ಧರಾಗಿದ್ದಾರೆ. ಆದರೆ ಈ ಐಷಾರಾಮಿ ಮನೆಗಳನ್ನು ಸಾಮಾನ್ಯ ರಷ್ಯನ್ನರಿಂದ ರಹಸ್ಯವಾಗಿಯೇ ಇಡಲಾಗಿದೆ. ಆದರೆ ಇವುಗಳು ಉಕ್ರೇನಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಗುರಿಯಾಗುವ ಸಾಧ್ಯತೆಗಳಿರುವುದರಿಂದ, ಅವುಗಳನ್ನು ಪುಟಿನ್ ಮತ್ತಿತರ ನಾಯಕರು ಬಳಸುವುದು ಅನುಮಾನಾಸ್ಪದವಾಗಿದೆ.

ಉಕ್ರೇನಿನ ಯುದ್ಧಭೂಮಿಯಿಂದ ದೂರ

ರಷ್ಯಾದ ಸರ್ವಾಧಿಕಾರಿ ನಾಯಕ ಈಗ ಭೂಗರ್ಭ ಬಂಕರ್‌ಗಳನ್ನು ಹೊಂದಿರುವ ಅರಮನೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕ್ರಿಮಿಯಾದಲ್ಲಿನ ಅವರ ನಿವಾಸ ಒಲಿವ್ಯೇ ಸೆವಾಸ್ಟೊಪೋಲ್‌ನ ದಕ್ಷಿಣ ಭಾಗದಲ್ಲಿದೆ. ಈ ಪ್ರದೇಶದ ಮೇಲೆ ಉಕ್ರೇನ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇದು ಹೊಂದಿರುವ ಸುದೀರ್ಘ ಕರಾವಳಿಯನ್ನು ಜಾರ್ ಚಕ್ರವರ್ತಿಗಳೂ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಉಕ್ರೇನಿನಲ್ಲಿ ರಷ್ಯಾದ ಯುದ್ಧ ಹಿನ್ನಡೆ ಅನುಭವಿಸಿದಾಗ ಪುಟಿನ್ ಅವರ ಸುರಕ್ಷತಾ ಭಯಗಳು ಇನ್ನಷ್ಟು ಹೆಚ್ಚಾಗುತ್ತವೆ ಎನ್ನಲಾಗಿದೆ. ಪುಟಿನ್ ಅವರು ತನ್ನ ಅಧಿಕಾರಾವಧಿಯಲ್ಲಿ ಆರು ಹತ್ಯಾ ಪ್ರಯತ್ನಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಈಗ ಇನ್ನಷ್ಟು ಕಡಿಮೆಯಾಗಿದ್ದು, ಕಾಣಿಸಿಕೊಂಡರೂ ಅದು ಸಾಕಷ್ಟು ಯೋಜಿತ, ಸುರಕ್ಷಿತವಾಗಿರುತ್ತದೆ.

ಹಲವಾರು ವರದಿಗಳ ಪ್ರಕಾರ, ಪುಟಿನ್ ಅವರಿಗಿರುವ ಅತಿದೊಡ್ಡ ಭಯವೆಂದರೆ, ತಾನೂ ಎಲ್ಲಿ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಎದುರಿಸಿದ ಪರಿಸ್ಥಿತಿ ಎದುರಿಸಬೇಕಾಗುತ್ತದೆಯೋ ಎನ್ನುವುದಾಗಿದೆ. ಗಡಾಫಿಯನ್ನು ಲಿಬಿಯಾದ ಜನರ ಗುಂಪೇ ಹಿಡಿದು, ಹಿಂಸಿಸಿ, ಲಿಬಿಯಾದಲ್ಲೇ ಭೀಕರವಾಗಿ ಕೊಂದಿದ್ದರು. ಈ ಘಟನೆ ಪುಟಿನ್ ಅವರನ್ನು ಸಾಕಷ್ಟು ಹೆದರಿಸಿದ್ದು, ಅವರು ರಷ್ಯಾದಲ್ಲಿ ದಂಗೆ ನಡೆಯಬಹುದೇ, ತನ್ನ ಭವಿಷ್ಯಕ್ಕೆ ತೊಂದರೆ ಉಂಟಾಗಬಹುದೇ ಎಂಬ ಭಯ ಹೊಂದಿದ್ದಾರೆ. ಪುಟಿನ್ ಈ ಘಟನೆಯನ್ನು ಒಂದು ಸ್ಪಷ್ಟ ಸಂದೇಶವೆಂಬಂತೆ, ತನ್ನ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಂತೆ ಪರಿಗಣಿಸಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಪುಟಿನ್ ಅವರ ರಾಜಕೀಯ ಎದುರಾಳಿಯಾದ ಯೂರಿ ಫೆಲ್ಶ್‌ಟಿನ್ಸ್‌ಕಿ ಅವರು ಪುಟಿನ್ ಅವರಿಗೆ ತಾನೇನಾದರೂ ರಷ್ಯಾದಲ್ಲಿ ತನ್ನ ನಿಯಂತ್ರಣವನ್ನು ಸಡಿಲಗೊಳಿಸಿದರೆ, ತಾನೂ ಕೆಟ್ಟ ಅಂತ್ಯ ಕಾಣಬಹುದು ಎಂಬ ಕಾಡುತ್ತಿದೆ ಎಂದಿದ್ದಾರೆ. "ಪುಟಿನ್ ಅವರಿಗೆ ತನ್ನ ಶೈಲಿಯ ಆಡಳಿತ, ಸರ್ಕಾರ ಸಾಧಾರಣ ಸನ್ನಿವೇಶದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಅರಿವಿದೆ. ಅವರು ಖಂಡಿತವಾಗಿಯೂ ಓರ್ವ ಆದರ್ಶವಾದಿ ಆಡಳಿತಗಾರನಲ್ಲ" ಎಂದು ಫೆಲ್ಶ್‌ಟಿನ್ಸ್‌ಕಿ ಹೇಳುತ್ತಾರೆ. ಪುಟಿನ್ ಅವರ ಆಡಳಿತದ ವಿರೋಧಿಯಾಗಿರುವ ಅವರು ಓರ್ವ ರಷ್ಯನ್ ಇತಿಹಾಸಕಾರ, ಬರಹಗಾರ, ರಾಜಕೀಯ ವಿಶ್ಲೇಷಕರಾಗಿದ್ದಾರೆ. ಅವರು ರಷ್ಯನ್ ರಾಜಕಾರಣದ ಕುರಿತ, ಅದರಲ್ಲೂ ಸೋವಿಯತ್ ಒಕ್ಕೂಟ ಹಾಗೂ ಸೋವಿಯತ್ ಬಳಿಕದ ರಷ್ಯಾದ ಕುರಿತ ಸಂಶೋಧನೆ ಮತ್ತು ಬರಹಗಳಿಗಾಗಿ ಖ್ಯಾತರಾಗಿದ್ದಾರೆ.

ಲೇಖಕರು: ಗಿರೀಶ್ ಲಿಂಗಣ್ಣ

(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News