ನನ್ನ ಮನೆ ಮೇಲೆ FBI ಅಘೋಷಿತ ದಾಳಿ ನಡೆಸಿದೆ: ಟ್ರಂಪ್ ಆಕ್ರೋಶ

ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಎಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲವೆಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.   

Written by - Puttaraj K Alur | Last Updated : Aug 9, 2022, 10:31 AM IST
  • ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾ ನಿವಾಸದ ಮೇಲೆ FBI ದಾಳಿ
  • ಇದು ಕಾನೂನು ಪಾಲಿಸಬೇಕಾದ ಸಂಸ್ಥೆಯೇ ಮಾಡಿರುವ ದುಷ್ಕೃತ್ಯವೆಂದು ಆರೋಪ
  • ತಮ್ಮ ನಿವಾಸದ ಮೇಲಿನ ಅಘೋಷಿತ ದಾಳಿ ವಿರುದ್ಧ ಕಿಡಿಕಾರಿದ ಡೊನಾಲ್ಡ್ ಟ್ರಂಪ್
ನನ್ನ ಮನೆ ಮೇಲೆ FBI ಅಘೋಷಿತ ದಾಳಿ ನಡೆಸಿದೆ: ಟ್ರಂಪ್ ಆಕ್ರೋಶ title=
ಡೊನಾಲ್ಡ್ ಟ್ರಂಪ್ ಫ್ಲೋರಿಡಾ ನಿವಾಸದ ಮೇಲೆ FBI ದಾಳಿ

ವಾಷಿಂಗ್ಟನ್: ಫ್ಲೋರಿಡಾದಲ್ಲಿರುವ ತನ್ನ ಮಾರ್-ಎ-ಲಾಗೊ ನಿವಾಸದ ಮೇಲೆ ಎಫ್‌ಬಿಐ ಏಜೆಂಟ್‌ಗಳು ಸೋಮವಾರ ದಾಳಿ ನಡೆಸಿದ್ದಾರೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಘೋಷಿತ ದಾಳಿ ನಡೆಸುವ ಮೂಲಕ ಎಫ್‌ಬಿಐ ಏಜೆಂಟ್‌ಗಳು ದುರ್ನಡತೆ ತೋರಿದ್ದಾರೆಂದು ಟ್ರಂಪ್ ಆರೋಪಿಸಿದ್ದಾರೆ.  

‘ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ, ಏಕೆಂದರೆ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ನನ್ನ ಸುಂದರ ಮಾರ್-ಎ-ಲಾಗೊ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಎಫ್‌ಬಿಐ ಏಜೆಂಟ್‌ಗಳ ದೊಡ್ಡ ಗುಂಪು ಮನೆಯನ್ನು ಆಕ್ರಮಿಸಿಕೊಂಡು ಶೋಧಕಾರ್ಯಾಚರಣೆ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಎಂದೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ’ವೆಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.   

ಇದನ್ನೂ ಓದಿ: ಕಾಬೂಲ್‌ನ ಮಸೀದಿಯಲ್ಲಿ ಬಾಂಬ್ ಸ್ಪೋಟ, 8 ಸಾವು, 18 ಮಂದಿಗೆ ಗಾಯ

‘ಎಫ್‌ಬಿಐ ದಾಳಿ ವೇಳೆ ನನ್ನ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆಯಲಾಗಿದೆ. ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ಇಂತಹ ದಾಳಿ ನಡೆಯುತ್ತದೆ. ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ’ ಅಂತಾ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇದು ಕಾನೂನು ಪಾಲಿಸಬೇಕಾದ ಸಂಸ್ಥೆಯೇ ಮಾಡಿರುವ ದುಷ್ಕೃತ್ಯ. 2024ರಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಯಸದ ತೀವ್ರಗಾಮಿ ಎಡ ಡೆಮಾಕ್ರಾಟ್‌ಗಳ ದಾಳಿ. ಈ ದಾಳಿ ಗಮನಿಸಿದರೆ ಡೆಮಾಕ್ರಟ್‌ಗಳು ಏನು ಬೇಕಾದರೂ ಮಾಡುತ್ತಾರೆ’ ಎಂದು ಟ್ರಂಪ್ ಕಿಡಿಕಾರಿದ್ದಾರೆ.

2020ರಲ್ಲಿ ಟ್ರಂಪ್ ಶ್ವೇತಭವನ ತೊರೆದ ನಂತರ ತಮ್ಮ ಫ್ಲೋರಿಡಾದ ನಿವಾಸಕ್ಕೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ. ನ್ಯಾಷನಲ್ ಆರ್ಕೈವ್ಸ್ ಫೆಬ್ರವರಿಯಲ್ಲಿ ಟ್ರಂಪ್‌ರ ಫ್ಲೋರಿಡಾ ಎಸ್ಟೇಟ್‌ನಿಂದ 15 ಬಾಕ್ಸ್‌ಗಳ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅವರ ಮರುಚುನಾವಣೆಯ ಸೋಲಿನ ನಂತರ ವಾಷಿಂಗ್ಟನ್‌ನಿಂದ ಹೊರಡುವಾಗ ಅವರೊಂದಿಗೆ ಕೊಂಡೊಯ್ಯಲಾದ ಹೆಚ್ಚು ವರ್ಗೀಕೃತ ದಾಖಲೆಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆಗೂ ಮುನ್ನ ಸಿಖ್ ಮಹಿಳೆ ವಿಡಿಯೋ, ಪತಿಯ ಕ್ರೌರ್ಯ ಕೇಳಿದ್ರೆ ಬೆಚ್ಚಿಬೀಳ್ತೀರಾ!

‘ಇದು ದುಃಖಕರ ಸಂಗತಿ. ಅಮೆರಿಕ ಹಿಂದೆಂದೂ ನೋಡಿರದ ಮಟ್ಟದಲ್ಲಿ ಭ್ರಷ್ಟವಾಗಿದೆ. ‘ಇದು ಉನ್ನತ ಮಟ್ಟದ ರಾಜಕೀಯ ಗುರಿಯಾಗಿದೆ. ಅವರು ನನ್ನ ಸುರಕ್ಷಿತ ನೆಲೆಯನ್ನು ಒಡೆದುಹಾಕಿದರು. ಡೆಮಾಕ್ರಟ್ ರಾಷ್ಟ್ರೀಯ ಸಮಿತಿಗೆ ನುಗ್ಗಿದ್ದ ವಾಟರ್‌ಗೇಟ್‌ ಪ್ರಕರಣಕ್ಕೂ ಇದಕ್ಕೂ ಏನು ವ್ಯತ್ಯಾಸ? ನಾನು ಗ್ರೇಟ್ ಅಮೆರಿಕನ್ ಜನರಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ’ ಎಂದು ಟ್ರಂಪ್ ಗುಡುಗಿದ್ದಾರೆ.

ಟ್ರಂಪ್ ನಿವಾಸದ ಮೇಲೆ ಏಕೆ ದಾಳಿ ನಡೆಸಲಾಗಿದೆ ಮತ್ತು ಶೋಧ ಕಾರ್ಯ ಮುಂದುವರೆದಿದೆಯೇ ಎಂಬುದರ ಬಗ್ಗೆ ಎಫ್‌ಬಿಐ ಪ್ರತಿಕ್ರಿಯಿಸಲು ನಿರಾಕರಿಸಿದೆ. ಫೆಡರಲ್ ಏಜೆಂಟ್‌ಗಳು ತನ್ನ ಮನೆಯಲ್ಲಿ ಏಕೆ ಇದ್ದಾರೆ ಎಂಬುದರ ಕುರಿತು ಟ್ರಂಪ್ ಯಾವುದೇ ಸೂಚನೆ ನೀಡಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News